ಅವರ ಬಿಟ್ಟು ಅವರ ಬಿಟ್ಟು ಇವರ್ಯಾರು ?

ಸುದ್ದಿ360: ರಾಜಕಾರಣಿಗಳು ತಮ್ಮ ತಮ್ಮ ಸ್ತರದಲ್ಲಿ ನಡೆಯುವ ವಿದ್ಯಮಾನಗಳಿಗಿಂತಲೂ ವಿರೋಧಿ ಪಾಳಯದಲ್ಲಿನ ಆಗುಹೋಗುಗಳಲ್ಲಿ ಅತೀವ ಆಸಕ್ತಿ ವಹಿಸಿರುತ್ತಾರೆ. ಅಲ್ಲದೆ ಅದರಿಂದ ರಾಜಕೀಯವಾಗಿ ಆಗುವ ಲಾಭದ ಲೆಕ್ಕಾಚಾರದಲ್ಲಿ ಸದಾ ಇರುತ್ತಾರೆ ಎಂದರೆ ತಪ್ಪಾಗಲಾರದು.  ಇದು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತ್ತಷ್ಟು ಬಿರುಸುಗೊಳ್ಳುತ್ತದೆ. ಹಾಗೆಯೇ ಕೆಸರೆರೆಚಾಟವೂ ಶುರುವಾಗುತ್ತೆ ನೋಡಿ… ಮತದಾರ ಮಾತ್ರ ಹೈರಾಣಾಗಿ ಹೋಗುತ್ತಾನೆ. ನಾವು ಮತ ಚಲಾಯಿಸಿದ್ದು ಈ ವ್ಯಕ್ತಿಗಾ. . .!? ಎಂಬ ಆಶ್ಚರ್ಯದಾಯಕ ಪ್ರಶ್ನೆಗಳು ಉದ್ಭವಿಸೋದ್ರಲ್ಲಿ ಸಂಶಯವಿಲ್ಲ.

ಬಲ್ಲವನೇ ಬಲ್ಲ ಬೆಲ್ಲದಾ ಸವಿಯ… ಎಂಬಂತೆ ರಾಜಕಾರಣಿಗಳಿಗಷ್ಟೇ ಗೊತ್ತು ಅಧಿಕಾರದ ಪದವಿಯಲ್ಲಿ ಏನೆಲ್ಲಾ ನಡೆಯುತ್ತವೆ ಮತ್ತು ಹೇಗೆಲ್ಲಾ ಅಭಿವೃದ್ಧಿ ಮಾಡ (ಆಗ)ಬಹುದು ಎಂದು. ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಆಶ್ವಾಸನೆಗಳಲ್ಲಿ ಲಾಭದಾಯಕವಾದ (ಜನರಿಗೆ?) ಒಂದೆರಡು ಈಡೇರಿಸಿದಂತೆ ಮಾಡಿ ಮತ್ತೆ ಕೆಲವು ಅಧಿಕಾರಾವಧಿ ಮುಗಿಯುತ್ತಾ ಬಂದರೂ ಆಶ್ವಾಸನೆಗಳಾಗಿಯೇ ಉಳಿದು ಮುಂದಿನ ಚುನಾವಣೆಯ ಪ್ರಣಾಳಿಕೆಗಳಾಗುತ್ತವೆ. ಹೀಗೆ ಹೇಳುತ್ತಾ ಹೋದರೆ ನೀವು ನನ್ನನ್ನು ನೋಡುವ ದೃಷ್ಟಿ ಬೇರೆಯಾದೀತು ಇಲ್ಲವೇ ಇವನಿಗೆ ಬರೀಲಿಕ್ಕೆ ಬೇರೆ ಏನು ಸಿಕ್ಕಿಲ್ಲ  ಎಂದೆನಿಸಿ ಪುಟವನ್ನು ತಿರುವುದರಲ್ಲಿ ಸಂಶಯವಿಲ್ಲ. ಏನಂತೀರಾ…

ಇರಲಿ ಈಗ ನಮ್ಮ ದಾವಣಗೆರೆ ವಿಷಯವನ್ನೇ ತೆಗೆದುಕೊಳ್ಳೋಣ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಎಲ್ಲವನ್ನೂ ಒರೆ ಹಚ್ಚಿ ನೋಡಲು ಮತದಾರ ಅಶಕ್ತ. ಅದಕ್ಕೆಂದೇ ಸರ್ಕಾರಿ ಇಲಾಖೆಗಳಿವೆ, ಕಾನೂನು ಕಟ್ಟಳೆಗಳಿವೆ. ಇದು ರಾಜಕಾರಣಿಗಳಿಗೆ ಪ್ರತ್ಯೇಕವಾಗಿ ಅನ್ವಯಿಸುವುದಿಲ್ಲ ಅಲ್ಲವೇ?

ಇಲ್ಲಿನ ರಾಜಕೀಯ ಪ್ರತಿಸ್ವರ್ಧಿಗಳು ಒಬ್ಬರ ಮೇಲೋಬ್ಬರು ಆಪಾದನೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ಆಡಳಿತಾವಧಿಯಲ್ಲಿನ ಲೋಪಗಳನ್ನು, ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದರೆ, ನಮ್ಮ ಬಳಿಯೂ ನಿಮ್ಮ ಅಧಿಕಾರವಧಿಯಲ್ಲಿ ಏನೆಲ್ಲಾ ಆಗಿದೆ ಎಂದು ದಾಖಲೆ ಇದೆ ಎಂದು ಬಿಜೆಪಿ ನಾಯಕರು ಘರ್ಜಿಸುತ್ತಾರೆ.

ಹೀಗೆಯೇ ಸಾಕಷ್ಟು ಸುದ್ದಿಗೋಷ್ಠಿಗಳು ಇಂತಹ ಆಪಾದನೆಗಳನ್ನು ಹೊರಿಸಿ ಮಾಡಿದ್ದೂ ಇದೆ. ನಾವುಗಳೆಲ್ಲಾ ಸಾಮಾನ್ಯವಾಗಿ ಹೆಚ್ಚಾಗಿ ಹಳ್ಳಿಗಳಲ್ಲಿ   ಮಕ್ಕಳು ಆಡುವ ಈ ಆಟವನ್ನು ನೋಡಿದ್ದೇವೆ.

ಕಣ್ಣಾ ಮೂಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ
ಬಿಡ್ಲಾ. . .? ಬಿಡ್ಲಾ. . . !?

ಈ ಆಟದ ನುಡಿಗಳಲ್ಲಿ ತಾತ್ವಿಕವಾಗಿ ಏನೆಲ್ಲ ಅರ್ಥವಿದ್ದರೂ ಅದರ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. ರಾಜಕೀಯ ಬಣಗಳು ಇದನ್ನು ಈ ರೀತಿಯಾಗಿ ಅರ್ಥೈಸಿಕೊಂಡಿರಬಹುದೇ ಎಂಬ ಮಾತಿನಲ್ಲಿ ಹೇಳುವುದಾದರೆ, ನಿಮ್ಮ ಭ್ರಷ್ಟಾಚಾರಕ್ಕೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ನೀವು ನಮ್ಮ ಮೇಲಿನ ಆಪಾದನೆಗೆ ದಾಖಲೆ ತೋರ್ಸಿ ನೋಡೋಣ…! ನಾನು ದಾಖಲೆ ಕೊಡ್ಲಾ. . .? ಕೊಡ್ಲಾ. .??  ನಮ್ಮ ಹಕ್ಕಿ ಬಿಡ್ಲಾ ಬಿಡ್ಲಾ. . . ? ಎಂಬಂತೆ ಭಾಸವಾಗ್ತಿದೆ. ಅವರು ಬಿಡು ಅಂತ ಹೇಳಂಗಿಲ್ಲ. ಇವರು ಬಿಡ್ಲಾ ಬಿಡ್ಲಾ ಅನ್ನೋದು ಬಿಡಂಗಿಲ್ಲ ಇದು ಇಲ್ಲಿನ ಮತದಾರರನ್ನು ಮಾತನಾಡಿಸಿದರೆ ಸಾಕಷ್ಟು ಜನರಿಂದ ಬರುವ ಹಾಸ್ಯಮಿಶ್ರಿತದ ಬೇಸರದ ನುಡಿಗಳು.

ಜತೆಗೆ ಮತ್ತೆ ಕೆಲವರು ಹೇಳುವಂತೆ ‘ಹೌದು ಈ ರಾಜಕಾರಣಿಗಳು ಯಾರನ್ನು ಮಂಗ ಮಾಡಲು ಹೊರಟಿದ್ದಾರೆ? ತಮ್ಮ ಬಳಿ ಇರುವ ವಿರೋಧಿ ಬಣದ ಭ್ರಷ್ಟಾಚಾರದ ದಾಖಲೆಗಳನ್ನು ಇನ್ನೊಂದು ಬಣ ಜನತೆಯ ಮುಂದಿಟ್ಟರೆ ಮಾತ್ರ  ಇವರು ಬಹಿರಂಗಪಡಿಸಬೇಕೆ? ಇವರಿಗೆ ಸಾಮಾಜಿಕ ಕಳಕಳಿ ಇಲ್ಲವೇ? ಯಾರ ಬಳಿ ದಾಖಲೆ ಇದೆಯೋ ಅವರು ಜಗಜ್ಜಾಹೀರು ಮಾಡಿ ಚುನಾವಣೆಯಲ್ಲಿ ಅವರನ್ನು ಬೆತ್ತಲೆ ಮಾಡುವುದನ್ನ ಬಿಟ್ಟು, ಅವರು ನನ್ನ ಅಧಿಕಾರಾವಧಿಯ ದಾಖಲೆಗಳನ್ನು ಬಹಿರಂಗ ಪಡಿಸಿದರೆ ನಾನು ಅವರ ಭ್ರಷ್ಟಾಚಾರಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಹೇಳುವುದು ಬ್ಲಾಕ್ ಮೇಲ್ ತಂತ್ರವಲ್ಲದೆ ತಮ್ಮ ಆಡಳಿತಾವಧಿಯ ಲೋಪಗಳನ್ನು ಮುಚ್ಚಿಕೊಳ್ಳುವ ತಂತ್ರವಲ್ಲವೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ನಗರದಲ್ಲಿನ ಇತ್ತೀಚಿನ ಬೆಳವಣಿಗೆಯನ್ನು ಅವಲೋಕಿಸಿದರೆ, ವನ್ಯಜೀವಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಇದನ್ನು ಚುನಾವಣೆಗೆ ಬಹು ದೊಡ್ಡ ಅಸ್ತ್ರದಂತೆ ಬಳಸಲು ಹೋದದ್ದು, ಅಂತೆಯೇ ಬಿಜೆಪಿಯ ಮೇಲೆ 40 ಪರ್ಸೆಂಟ್ ಕಮೀಷನ್ ಆರೋಪ ಸೇರಿದಂತೆ ಆಡಳಿತದ ವಿರುದ್ಧ ದೂರುತ್ತಾ ಕಾಂಗ್ರೆಸ್ ಪ್ರತಿಭಟನೆಗಿಳಿದಿದ್ದು ಎಲ್ಲವನ್ನೂ ಮುಂದಿನ ಆಡಳಿತವನ್ನು ಯಾರ ಕೈಗೆ ಇಡಲಿ ಎಂದು ನಿರ್ಣುಯಿಸುವ ಮತದಾರ ಮಾತ್ರ ಮೂಕಪ್ರೇಕ್ಷಕನಾಗಿದ್ದಾನೆ.

ಬಿಜೆಪಿಯದು 40 ಪರ್ಸೆಂಟ್ ಸರ್ಕಾರ, ದಿನಕ್ಕೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ಆಸ್ತಿ ಮಾಡಲು ಹೊರಟಿದ್ದಾರೆ.

-ಎಸ್ ಎಸ್ ಮಲ್ಲಿಕಾರ್ಜುನ್ ಮಾಜಿ ಸಚಿವರು

ಬಾಯಿಗೆ ಬಂದ ಆರೋಪಗಳನ್ನು ಮಾಡುವ ಕಾಂಗ್ರೆಸ್ ಮುಖಂಡರು ದಾಖಲೆ ಸಮೇತ ಬನ್ನಿ, ನನ್ನದೇನಾದರೂ ಲೋಪವಿದ್ದರೆ ನಾನೇನಾದ್ರು ಅಕ್ರಮ ಆಸ್ತಿ ಮಾಡಿದ್ದರೆ, ಅವುಗಳ ದಾಖಲೆ ತನ್ನಿ ಸಾಬೀತು ಮಾಡ್ರಿ, “ನಾನು ಆಕ್ಷಣದಲ್ಲೇ ಪ್ರಾಧಿಕಾರದಿಂದ ಅಕ್ರಮ ಆಸ್ತಿ ಪಡೆದಿದ್ರೆ ಪ್ರಾಧಿಕಾರಕ್ಕೆ ಬರೆದುಕೊಡ್ತೇನೆ. ಮಹಾನಗರ ಪಾಲಿಕೆಯಿಂದ ಪಡೆದಿದ್ರೆ ಮಹಾನಗರ ಪಾಲಿಕಗೆ ಬರೆದುಕೊಡ್ತೇನೆ. ನಾನು ಛಾಪಾಕಾಗದ ಸಮೇತ ಬಂದು ನಿಲ್ಲಲು ಸಿದ್ದ. ಹೀಗೆಯೇ ಮಲ್ಲಿಕಾರ್ಜುನ್ ಅವರು ಮಂತ್ರಿಯಾದಾಗ ನಡೆದ ಅಕ್ರಮಗಳನ್ನು ನಾನು ದಾಖಲೆ ಸಮೇತ ಬಂದು ಸಾಬೀತು ಮಾಡ್ತೇನೆ. ನೀವೂ ಕೂಡ ಹೀಗೆ ಬರಲು ಸಿದ್ಧರಿದ್ದೀರಾದರೆ ಈ ಸವಾಲನ್ನು ನಾನು ಕುಟುಂಬ – ಬಂಧುಗಳ ಸಮೇತ ಸ್ವೀಕರಿಸಲು ರೆಡಿ. ನೀವು ರೆಡಿನಾ?

-ಯಶವಂತ ರಾವ್ ಜಾಧವ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು

admin

admin

Leave a Reply

Your email address will not be published. Required fields are marked *

error: Content is protected !!