ಸುದ್ದಿ360 ಬೆಂಗಳೂರು, ಅ. 23 : ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರ ನಿಧನದಿಂದ ಉತ್ತಮ ಜನಪ್ರತಿನಿಧಿಯನ್ನು ಹಾಗೂ ಕರ್ನಾಟಕ ರಾಜ್ಯ ಬೆಳೆಯುತ್ತಿರುವ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ಆರ್. ಟಿ. ನಗರ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ :
ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ನಿಧನ ದುರ್ದೈವದ ಸಂಗತಿ. ಅವರ ಪಾರ್ಥಿವ ಶರೀರ ಅವರ ಸ್ವಕ್ಷೇತ್ರವಾದ ಸವದತ್ತಿಗೆ ಒಯ್ಯಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮಕ್ರಿಯೆಯನ್ನು ನೆರವೇರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರೂ ಭಾಗವಹಿಸಲು ತೆರಳುತ್ತಿರುವುದಾಗಿ ತಿಳಿಸಿದರು.
ಅತ್ಯಂತ ಕ್ರೀಯಾಶೀಲ ವ್ಯಕ್ತಿ :
ಆನಂದ ಮಾಮನಿಯವರು ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದು, ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ವಿಶೇಷ ರೈತರು, ನೀರಾವರಿ ಯೋಜನೆಗಳ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದರು. ಅವರ ಕ್ಷೇತ್ರದಲ್ಲಿ ಮಲಪ್ರಭಾ ನೀರಾವರಿ ಯೋಜನೆಯಡಿ ಎಂಟು ಲಿಫ್ಟ್ ಗೇಟ್ಗಳನ್ನು ಪುನ: ನಿರ್ಮಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಮೊದಲ ಬಾರಿಗೆ ಶಾಸಕರಾಗಿದ್ದ ಅವಧಿಯಿಂದಲೇ ಕ್ಷೇತ್ರದ ಏಳಿಗೆ ಬಗೆಗಿನ ಅವರ ಚಿಂತನೆ ಎಲ್ಲರಿಗೂ ಮಾದರಿಯಾಗಿತ್ತು. ರಾಜಕಾರಣ ಕ್ಷೇತ್ರದಲ್ಲಿಉಜ್ವಲವಾದ ಭವಿಷ್ಯವನ್ನು ಹೊಂದಿದ್ದರು.ಅಗಾಧವಾದ ಆಡಳಿತದ ಅನುಭವವನ್ನೂ ಹೊಂದಿರುವುದು ನಮಗೆಲ್ಲಾ ದಿಗ್ಭ್ರಮೆಯ ವಿಷಯವಾಗಿದೆ. ವಿಧಾನಸಭೆಯ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಲಾಪಗಳನ್ನು ನಿರ್ವಹಿಸುತ್ತಿದ್ದರು ಎಂದರು.
ಆನಂದ ಮಾಮನಿಯವರು ಸಣ್ಣವಯಸ್ಸಿನಲ್ಲಿಯೇ ಅನಾರೋಗ್ಯದಿಂದ ನಮ್ಮನ್ನು ಅಗಲಿರುವುದು ಆಘಾತ ತರುವಂತಹ ಸಂಗತಿ. ಲಿವರ್ ಸಮಸ್ಯೆ ಕ್ಯಾನ್ಸರ್ ಆಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ತೆರಳಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆನಂದ ಮಾಮನಿಯವರ ತಂದೆಯವರೂ ಸಹ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದಾಗಲೇ ಹೃದಾಯಾಘಾತದಿಂದ ಅಸುನೀಗಿದ್ದರು. ಅವರ ಅಣ್ಣನವರೂ ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದರು.ಇವರ ಸಂಬಂಧಿಕರಾದ ಮಾಜಿ ಶಾಸಕ ರಾಜಣ್ಣ ಮಾಮನಿಯವರೂ ಸಹ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬ ಒಂದರ ನಂತರ ಒಂದು ಆಘಾತವನ್ನು ಎದುರಿಸುತ್ತಿದೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಹಾಗೂ ವೈಯಕ್ತಿಕವಾಗಿ ನನಗೂ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.