ಆಸರೆಯಾದ ಅಜ್ಜಿಯ ನಿವೃತ್ತಿಯ ದಿನದಂದೆ ಹಾಲಮ್ಮನ ಕೊರಳಿಗೆ 5 ಸ್ವರ್ಣ ಪದಕ

ಸುದ್ದಿ360 ದಾವಣಗೆರೆ.ಫೆ.28: ತಾನು 3ನೇ ತರಗತಿಯಲ್ಲಿ ಓದುತ್ತಿರುವಾಗಲೇ ತನ್ನ ಅಮ್ಮನನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಹಾಲಮ್ಮ ಬಿ. ಇಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಐದು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಐದು ಚಿನ್ನದ ಪದಕ ಗಳಿಸಿದ ಹಾಲಮ್ಮ ಬಿ.  ತನ್ನ ಅಜ್ಜಿ ಶಂಬಮ್ಮ ಮತ್ತು ತಂದೆ ಬಸಪ್ಪನವರ ಕೊರಳಿಗೆ ಪದಕಗಳನ್ನು ಹಾಕಿ ಕೃತಜ್ಞತಾ ಭಾವ ತೋರಿ, ಸಂತಸ ವ್ಯಕ್ತಪಡಿಸಿದ ಕ್ಷಣ.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪದವಿಯೊಂದಿಗೆ ಐದು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿರುವ ಹಾಲಮ್ಮ ‘ಸುದ್ದಿ360’ ಯೊಂದಿಗೆ ಸಂತಸವನ್ನು ಹಂಚಿಕೊಂಡರು.

ನನ್ನನ್ನು ಸಾಕಿ ಸಲಹಿದ ನನ್ನ ಅಜ್ಜಿಗೆ ಇಂದು ನಿವೃತ್ತಿಯ ದಿನವಾಗಿದೆ. ಇದೇ ದಿನ ನನಗೆ ಐದು ಸ್ವರ್ಣ ಪದಕಗಳು ಲಭಿಸಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ ಅವರು ಅಜ್ಜಿ ಶಂಬಮ್ಮ ಅಂಗನವಾಡಿ ಸಹಾಯಕಿಯಾಗಿ ಮತ್ತು ದೇವಸ್ಥಾನದಲ್ಲಿಯೂ ಕೆಲಸ ಮಾಡುತ್ತಾ ದುಡಿದು ನಮ್ಮನ್ನು ಸಾಕಿದರು. ತಂದೆ ಕೂಲಿ ಕೆಲಸ ಮಾಡುತ್ತಾರೆ. ನನ್ನ ಇಂದಿನ  ಈ ಹಂತ ತಲುಪಲು ನನ್ನ ಅಜ್ಜಿ ಮತ್ತು ತಂದೆ ಬಸಪ್ಪನವರೇ ಕಾರಣ. ಹಾಗೆಯೇ ನಮ್ಮ ಪ್ರಾಧ್ಯಾಪಕರೂ ಸಹ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಅವರ ತರಗತಿಗಳನ್ನು ಲಕ್ಷ್ಯವಿಟ್ಟು ಕೇಳಿಕೊಂಡಿದ್ದು ಮತ್ತು ಪರೀಕ್ಷೆ ಸಮೀಪಿಸುತ್ತಿದ್ದಂತೆ ಹೆಚ್ಚು ಹೆಚ್ಚು ಅಭ್ಯಾಸ ಮಾಡಿದ್ದರ ಫಲವಾಗಿ ಇಂದು 5 ಸ್ವರ್ಣ ಪದಕಗಳು ಲಭಿಸಿವೆ. ಮುಂದೆ ಎನ್ಇಟಿ, ಕೆ-ಸೆಟ್ ತೆಗೆದುಕೊಳ್ಳುವ ಮತ್ತು ಅವಕಾಶ ಸಿಕ್ಕರೆ ಪಿಎಚ್ ಡಿ ಮಾಡುವ ತಮ್ಮ ಒತ್ತಾಸೆಯನ್ನು ಹಾಲಮ್ಮ ಹೇಳಿಕೊಂಡರು.

Leave a Comment

error: Content is protected !!