ಆ.6, 7ರಂದು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ

ಸುದ್ದಿ360 ದಾವಣಗೆರೆ, ಆ.05: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ 2021-22 ನೇ ಸಾಲಿನ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ ಹಾಗೂ ವಿದ್ಯಾರ್ಥಿ ಕಲಾ ವಿಚಾರ ಸಂಕಿರಣವನ್ನು ನಾಳೆ ಆ.6 ರ  ಶನಿವಾರ ಹಾಗೂ ಆ.7 ರ ಭಾನುವಾರದಂದು ದಾವಣಗೆರೆ ಸರ್ಕಾರಿ ಪೌಢಶಾಲಾ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಇಂದು ಅಕಾಡೆಮಿಯ ಸದಸ್ಯ ಸಂಚಾಲಕಿ ಲಕ್ಷ್ಮೀ ಮೈಸೂರು ಮಾಹಿತಿ ನೀಡಿದರು. ದಾವಣಗೆರೆಯಲ್ಲಿ ಲಲಿತಕಲಾ ಅಕಾಡೆಮಿಯಿಂದ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕಲಾವಿದರಿಗೆ ಫೆಲೋಶಿಪ್ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಪಿ.ಎಸ್. ಪುಂಚಿತ್ತಾಯ, ಕಲಬುರ್ಗಿಯ ಪ್ರೂ. ವಿ.ಜಿ. ಅಂದಾನಿ, ರಾಯಚೂರಿನ ಹೆಚ್.ಹೆಚ್. ಮ್ಯಾದಾರ್, ಧಾರವಾಡದ ಎನ್.ಆರ್. ನಾಯ್ಕರ್, ತುಮಕೂರಿನ ಪ್ರಭು ಹರಸೂರು ಹಾಗೂ ಮೈಸೂರಿನ ಹರಿ ಅವರಿಗೆ ಫೆಲೋಶಿಪ್ ಪ್ರದಾನ ಮಾಡಲಾಗುವುದು. ಪ್ರತಿ ಕಲಾವಿದರಿಗೂ 2 ಲಕ್ಷ ರೂಪಾಯಿ ನಗದು ಪುರಸ್ಕಾರ ಹಾಗೂ ಸ್ಮರಣ ಫಲಕವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಆ.6 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಫೆಲೋಶಿಪ್ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನು ಹಿರಿಯ ಕಲಾವಿದ ಜಮಖಂಡಿಯ ವಿಜಯ ಸಿಂಧೂರ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಚಿತ್ರನಟ ಹಾಗೂ ಸಂಸ್ಕಾರ ಭಾರತಿ ಅಧ್ಯಕ್ಷ  ಸುಚೇಂದ್ರ ಪ್ರಸಾದ್, ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಉಪನಿರ್ದೇಶಕ ಹೆಚ್.ಕೆ. ಲಿಂಗರಾಜ್ ಆಡಲಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನಂತರ  ರಾಜ್ಯಮಟ್ಟದ ದೃಶ್ಯಕಲಾ ವಿಚಾರ ಸಂಕಿರಣ ನಡೆಯಲಿದ್ದು, ಮಧ್ಯಹ್ನ 12 ಗಂಟೆಗೆ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 2.30 ರಿಂದ 4 ಗಂಟೆವರೆಗೆ ದೃಶ್ಯ ಸಂಚಲನ ಚರ್ಚೆ, ಅಭಿವ್ಯಕ್ತ ಮಾಧ್ಯಮಗಳು ಕುರಿತು,  ಡಾ. ಸೌಮ್ಯಾ, ಚೌವ್ಹಾಣ್, ಸಾಹಿತ್ಯ ಮತ್ತು ಕಲಾ ಪರಿಭಾಷೆ-ಡಾ. ವತ್ಸಲಾ ಮೋಹನ್, ಚಲನಚಿತ್ರ ಮತ್ತು ದೃಶ್ಯಕಲೆ-ಸುಚೇಂದ್ರ ಪ್ರಸಾದ್, ನೃತ್ಯ ಪ್ರಕಾ ಆಂಗೀಕ ಭಾವಗಳು-ಡಾ. ವಿದ್ಯಾ ಶಿಮ್ಲಡ್ಕ, ಸೃಜನಶೀಲ ಮತ್ತು ಸಾಮಾಜಿ ಬದ್ಧತೆ ವಿಷಯ ಕುರಿತು ಮಾಹಿತಿ ನೀಡುವರು. ಸಂಜೆ 5 ರಿಂದ 6 ರವರೆಗೆ ಸಭಾ ಸಂವಾದ ನಡೆಯಲಿದೆ ಎಂದು ತಿಳಿಸಿದರು.

ಆ.7ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಅಧ್ಯಯನವಾಗಿ ಭೋಧಕ ರೂಪದಲ್ಲಿ ದೃಶ್ಯಕಲೆ ವಿಷಯ ಕುರಿತು ಡಾ. ಸುಭಾಷ್ ಕಮ್ಮಾರ್, ದತ್ತಾತ್ರೇಯ ಎನ್. ಭಟ್, 12 ಕ್ಕೆ ಕರ್ನಾಟಕ ಕಲೆಯ ಹೊರಹುಗಳು-ರಮೇಶ್ ಚಂದ್ರ, ಪ್ರತಿಕ್ರಿಯೆ-ಜಿ.ಜಿ. ಚಿಂತಾಮಣಿ, ಮಧ್ಯಾಹ್ನ 2.15 ಕ್ಕೆ ಕಲೆ ಮತ್ತು ಬದುಕು ಒಂದು ಒಳನೋಟ ಕುರಿತು ಎ.ಎಂ. ಪ್ರಕಾಶ್ ಸಂವಾದ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.

ಸಂಜೆ 5 ಗಂಟೆಗೆ ಸಮಾರೋಪ ನುಡಿಗಳನ್ನು ಯಶವಂತರಾವ್ ಸರದೇಶಪಾಂಡೆ ಆಡಲಿದ್ದು, ಮುಖ್ಯ ಅತಿಥಿಗಳಾಗಿ ಸಂಸ್ಕಾರ ಭಾರತಿ ಗೌರವಾಧ್ಯಕ್ಷ ಡಾ. ಆರ್.ಎಲ್. ಉಮಾಶಂಕರ್ ಆಗಮಿಸಲಿದ್ದಾರೆ. ಜಿಲ್ಲಾಧ್ಯಕ್ಷ ಎ. ಮಹಾಲಿಂಗಪ್ಪ ಹಾಗೂ ಅಕಾಡೆಮಿ ರಿಜಿಸ್ಟಾರ್ ಆರ್. ಚಂದ್ರಶೇಖರ್ ಉಪಸ್ಥಿತರಿರುವರು ಎಂದು ವಿವರಿಸಿದರು.

ದಾವಣಗೆರೆಯಲ್ಲಿ ಅಕಾಡೆಮಿಯ ಹಲವು ಕಾರ್ಯಕ್ರಮಗಳು ನಡೆದಿವೆ. ಆದರೆ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ನಡೆಯುತ್ತಿರುವುದು ಇದೇ ಮೊದಲು. ಕಾರ್ಯಕ್ರಮವನ್ನು ಜಿಲ್ಲಾ ಸಂಸ್ಕಾರ ಭಾರತಿ ಸಹಯೋಗದಲ್ಲಿ ಹಮ್ಮಕೊಂಡಿದ್ದು, ಎರಡು ದಿನದ ವಿಚಾರ ಸಂಕಿರಣದಲ್ಲಿ ಸುಮಾರು 10 ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದು, 60 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನ ಕಲೆಗಳಿಗೆ ನೀಡುವಂತೆ ದೃಶ್ಯಕಲೆಗೂ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ.
ಎ. ಮಹಾಲಿಂಗಪ್ಪ, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಸ್ಕಾರ ಭಾರತಿ ಸಹ ಕಾರ್ಯದರ್ಶಿ ನಾಗಭೂಷಣ್, ಸದಸ್ಯರಾದ ತಿಪ್ಪಣ್ಣ ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!