ಸುದ್ದಿ360 ದಾವಣಗೆರೆ, ಜೂ16: ಎ.ಐ.ಸಿ.ಸಿ. ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕೇಂದ್ರ ಬಿ.ಜೆ.ಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಇ. ಡಿ. ನೋಟಿಸ್ ನೀಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸಮಿತಿ, ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ದಿನಾಂಕ ಜೂ.17ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಂಜಪ್ಪ ರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ದೆಹಲಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಕಾಂಗ್ರೆಸ್ ಸಂಸದರು ಮತ್ತು ಎ.ಐ.ಸಿ.ಸಿ ನಾಯಕರು ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕುವ ಜೊತೆಗೆ ಪ್ರತಿಭಟನೆಗೆ ಅವಕಾಶವನ್ನು ನೀಡದೆ ಎ.ಐ.ಸಿ.ಸಿ ಕಚೇರಿಯ ಆವರಣದಲ್ಲಿ ಬಂಧನ ಮಾಡಿರುವುದನ್ನು ಮತ್ತು ಸಂವಿಧಾನದತ್ತವಾಗಿದ್ದ ಹಕ್ಕನ್ನೇ ಮೊಟುಕುಗೊಳಿಸುವ ಕೇಂದ್ರ ಸರ್ಕಾರ ಮತ್ತು ಪೊಲೀಸ್ ನಡೆಯನ್ನು ಖಂಡಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಘನತೆವೆತ್ತ ರಾಷ್ಟ್ರಪತಿಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿಪತ್ರ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪಕ್ಷದ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಗ್ರಾಮ ಪಂಚಾಯತ್, ಎಪಿಎಂಸಿ ಸದಸ್ಯರು ಹಾಗೂ ಮಾಜಿ ಸದಸ್ಯರುಗಳು ಮತ್ತು ಪಕ್ಷದ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ ಶೆಟ್ಟಿ ಕೋರಿದ್ದಾರೆ.