ಸುದ್ದಿಗೋಷ್ಠಿಯಲ್ಲಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿಕೆ
ಸುದ್ದಿ360 ದಾವಣಗೆರೆ.ಜು.01: ರಾಜ್ಯ ರೈತ ಸಂಘಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಅಧ್ಯಕ್ಷರು, ಸ್ವಯಂಘೋಷಿತ ಅಧ್ಯಕ್ಷರಾಗಿರುವ ಎಚ್ ಆರ್ ಬಸವರಾಜಪ್ಪರಿಗೂ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 2016ರಲ್ಲಿ ಎಚ್ ಆರ್ ಬಸವರಾಜಪ್ಪ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ರೈತಸಂಘ ರಾಜ್ಯ ಸಂಘಕ್ಕೆ ಸಲ್ಲಿಸಿದ ದೂರಿನ ಅನ್ವಯ ಅನುಸೂಯಮ್ಮ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸಮಿತಿ ನೀಡಿದ ವರದಿಯಲ್ಲಿ ಬಸವರಾಜಪ್ಪ ಅವರ ವಿರುದ್ಧದ ಆರೋಪ ರುಜುವಾತು ಆಗಿದ್ದರಿಂದ ಅವರನ್ನು ಸಂಘದಿಂದ ವಜಾ ಮಾಡಲಾಗಿದೆ. ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರೈತಸಂಘದಿಂದ ಐದು ವರ್ಷಗಳ ಕಾಲ ಹೊರಗಿಡಲಾಗಿದೆ. ಆದ್ದರಿಂದ ಅವರು ರೈತಸಂಘದಲ್ಲಿ ಇರಲು ಅನರ್ಹರು ಎಂದು ತಿಳಿಸಿದರು.
ಸಂಘದಿಂದ ಉಚ್ಛಾಟನೆಗೊಂಡಿರುವ ಬಸವರಾಜಪ್ಪನವರು ಕೂಡಲೇ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಮತ್ತು ಹಸಿರುಶಾಲು ಧರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷದೊಂದಿಗೆ ಶಾಮೀಲಾಗಿ ಹಣ ತೆಗೆದುಕೊಂಡಿರುವ ಸಂದರ್ಭದಲ್ಲಿಯೂ ಸತ್ಯಶೋಧನಾ ಸಮಿತಿಯ ತನಿಖೆಯಿಂದ ಆರೋಪ ರುಜುವಾತಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ್ ಶೇಖರ್ ನಾಯ್ಕ, ಬಸವರಾಜ್ ದಾಗಿನಕಟ್ಟೆ, ಕರೇಕಟ್ಟೆ ಖಲೀಂವುಲ್ಲ, ನ್ಯಾಮತಿಯ ನಾಗರಾಜಪ್ಪ, ಸತೀಶ್ ಮತ್ತು ರಂಗಸ್ವಾಮಿ ಇದ್ದರು.