ಎಫ್ ಆರ್ ಪಿ ದರ ಪರಿಷ್ಕರಿಸುವಂತೆ ಆಗ್ರಹಿಸಿ,  ಕಬ್ಬುಬೆಳೆಗಾರರಿಂದ ರಸ್ತೆ ತಡೆ – ಮನವಿ

ಸುದ್ದಿ360 ದಾವಣಗೆರೆ, ಆ.12: ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿರುವ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದ್ದು, ಕೂಡಲೇ ಪರಿಷ್ಕರಿಸುವಂತೆ ಆಗ್ರಹಿಸಿದ ಕಬ್ಬುಬೆಳೆಗಾರರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಇಂದು ರಸ್ತೆ ತಡೆ ನಡೆಸಿದರು.

ದಾವಣಗೆರೆ ಜಿಲ್ಲಾ ಪಂಚಾಯತಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಕಬ್ಬು ಬೆಳೆಗಾರರು ತಸ್ತೆ ತಡೆ ನಡೆಸಿದರು. ಈ ವೇಳೆ ಮಾತನಾಡಿದ ತೇಜಸ್ವಿ ವಿ. ಪಟೇಲ್ ಕಳೆದ ಸಾಲಿನಲ್ಲಿ ರೂ. 2900  ಇದ್ದ ಎಫ್‌ಆರ್‌ಪಿಯನ್ನು 3050ಕ್ಕೆ ಹೆಚ್ಚಿಸಲಾಗಿದೆ. ಆದರೆ ಈ ಹಿಂದೆ ನಿಗಧಿ ಮಾಡಿದ್ದ ಕಬ್ಬಿನ ಇಳುವರಿಯನ್ನು 95ಕೆಜಿಯಿಂದ 107 ಕೆಜಿಗೆ ಹೆಚ್ಚಿಸಲಾಗಿದೆ. ಇದು ಒಂದು ಕಡೆ ಕೊಟ್ಟು ಇನ್ನೊಂದು ಕಡೆಯಿಂದ ಕಸಿದುಕೊಳ್ಳುವ ನೀತಿಯಾಗಿದೆ ಎಂದು ಕಿಡಿಕಾರಿದರು.

ಕಟಾವು ಸೇರಿ ಕಬ್ಬಿನ ಉತ್ಪಾದನಾ ವೆಚ್ಚ ಪ್ರತಿ ಟನ್ನಿಗೆ 500ರೂಪಾಯಿಗಿಂತಲೂ ಹೆಚ್ಚಾಗಿದೆ. ಸಕ್ಕರೆ ಇಳುವರಿಯನ್ನು ಈ ಹಿಂದಿನಂತೆ 95 ಕೆಜಿಗೆ ನಿಗಧಿಪಡಿಸಿ, ಪ್ರತಿ ಟನ್‌ಗೆ 3500 ರೂ. ಎಫ್‌ಆರ್‌ಪಿ ನಿಗದಿಯಾಗಿದ್ದರೆ ಉತ್ಪಾದನಾ ವೆಚ್ಚವನ್ನು ಸರಿದೂಗಿಸಿಕೊಂಡು ಕಬ್ಬು ಬೆಳೆಗಾರರು ಒಂದಿಷ್ಟು ಲಾಭ ಕಾಣಲು ಸಾಧ್ಯವಾಗುತ್ತಿತ್ತು. ಪ್ರತಿ ಸಾರಿ ಎಫ್‌ಆರ್‌ಪಿ ಹೆಚ್ಚಿಸಿದರೂ ಸಕ್ಕರೆ ಇಳುವರಿಯ ಪ್ರಮಾಣವನ್ನು ಹೆಚ್ಚಿಸುತ್ತಲೇ ಬರುತ್ತಿರುವುದರಿಂದ ಎಫ್‌ಆರ್‌ಪಿಯ ಹೆಚ್ಚಳದಿಂದ ಕಬ್ಬು ಬೆಳೆಗಾರರಿಗೆ ಯಾವುದೇ ಅನುಕೂಲವಿಲ್ಲ ಎಂದು ವಿವರಿಸಿದರು.

ನಿಯಂತ್ರಣದ ಬದಲು ಕಲ್ಯಾಣ ಕಾರ್ಯವಾಗಲಿ

ಕಬ್ಬು ನಿಯಂತ್ರಣ ಮಂಡಳಿ ಹೆಸರಿಗೆ ತಕ್ಕ ಹಾಗೆ  ನಿಯಂತ್ರಣ ಮಾಡುತ್ತಾ ಬರುತ್ತಿದೇಯೇ ಹೊರತು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದು ಮಂಡಳಿಯ ಕಾರ್ಯವೈಖರಿಯನ್ನು ತೇಜಸ್ವಿ ವಿ. ಪಟೇಲ್ ಕುಟುಕಿದರು. ಸರ್ಕಾರ ಕೂಡಲೇ ಎಫ್ ಆರ್ ಪಿಯನ್ನು ಪರಿಷ್ಕರಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಪ್ರಾಚಾರ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಪ್ರಚುರಪಡಿಸುತ್ತದೆ. ಆದರೆ ಇಂತಹ ಕೊಟ್ಟು ಕಸಿದುಕೊಳ್ಳುವ ನೀತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸದರೆ ಮಾತ್ರ ತಿಳಿಯುತ್ತದೆ. ಕೇಂದ್ರ ಸರ್ಕಾರ ಇಂತಹ  ಜಾಣ ತಂತ್ರವನ್ನು ಅರಿಯದಷ್ಟು ಕಬ್ಬು ಬೆಳೆಗಾರರು ಮುಗ್ಧರಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲು ಯೋಜನೆ ಜಾರಿ ತರುವುದಾಗಿ ಹೇಳಿದ ನರೇಂದ್ರಮೋದಿಯವರು ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಆದಾಯವನ್ನು ಹೆಚ್ಚಿಸುತ್ತಲೇ ಬರುತ್ತಿದ್ದಾರೆ. ಗೌಪ್ಯವಾಗಿ ಉದ್ಯಮಿಗಳ ಸಾಲ ಮನ್ನಾ ಮಾಡುವ  ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ಸಾಲ ಮನ್ನಾಕ್ಕೆ ಹಿಂದೇಟು ಹಾಕುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ್ಮ ಕರಿಬಸಪ್ಪ, ಪೂಜಾರ್ ಅಂಜಿನಪ್ಪ, ಎಂ.ಬಿ. ಮುರುಗಯ್ಯ, ಕೈದಾಳೆ ಶ್ರೀಧರ್, ತಿಪ್ಪೇಸ್ವಾಮಿ, ಕೆ. ಬಸವರಾಜ್, ಡಿ.ಟಿ. ಶಂಕರ್, ಎಂ.ಬಿ. ಮಠದ್, ಎಂ.ಬಿ. ಮುರುಗಯ್ಯ, ಹನುಮೇಗೌಡ ಇತರರು ಇದ್ದರು.

Leave a Comment

error: Content is protected !!