ದಾವಣಗೆರೆ, ಜೂ.11: ಪರಿಶುದ್ಧ ಗಾಳಿ ಅಥವಾ ಆಕ್ಸಿಜನ್ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಪರಿಸರವೇ ಪಾಠ ಹೇಳಿಕೊಟ್ಟಿರುವುದು ಕಳೆದ ಎರಡು ವರುಷಗಳಲ್ಲಿ ಸಾಕಷ್ಟು ಅನುಭವಕ್ಕೆ ಬಂದಿದೆ ಎಂದು ಕಲಾವಿದೆ ಶೋಭಾ ಮಂಜುನಾಥ್ ಹೇಳಿದರು.
ನಗರದ ಶ್ಯಾಮನೂರು ಪಾರ್ಕ್ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಲಿಸವ್ವ ಜಾನಪದ ಕಲಾ ತಂಡದ ಕಲಾವಿದರಿಂದ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಪರಿಸರ ಪರೋಕ್ಷವಾಗಿ ಹಾನಿಯಾಗುತ್ತಿದೆ. ಗಾಳಿ ನೀರು ಮಣ್ಣು ಪ್ರತಿಯೊಂದು ಜೀವ ರಾಶಿಗೂ ಬೇಕು. ಅದನ್ನು ಕಲುಷಿತವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ವಿಶ್ವ ಪರಿಸರ ದಿನಾಚರಣೆ, ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗದೆ ಮುಂದಿನ ಪೀಳಿಗೆಗೆ ಜೀವ ತುಂಬುವಂತಾಗಬೇಕು. ಕಳೆದ ಎರಡು ವರುಷದಿಂದ ಗಾಳಿಯಿಂದಲೇ ಹರಡುತ್ತಿರುವ ರೋಗಕ್ಕೆ ಪರಿಶುದ್ಧ ಗಾಳಿಯ ಅಥವಾ ಆಕ್ಸಿಜನ್ನ ಅವಶ್ಯಕತೆ ಎಷ್ಟಿತ್ತು ಮತ್ತು ಎಷ್ಟಿದೆ ಎನ್ನುವ ಪಾಠವನ್ನು ಪರಿಸರವೇ ಹೇಳಿಕೊಟ್ಟಿದೆ. ಅದಕ್ಕಾಗಿಯಾದರೂ ಹಸಿರು ಬೆಳಸಿ ಉಸಿರು ಪಡೆಯೋಣ. ನೆಟ್ಟ ಗಿಡಗಳನ್ನು ಮಕ್ಕಳಂತೆ ಬೆಳೆಸೋಣ. ಮುಂದಿನ ನಮ್ಮದೇ ಪೀಳಿಗೆಗೆ ಪರಿಶುದ್ಧ ಗಾಳಿ ಲಭಿಸಲು ಪಣ ತೊಡೋಣ ಎಂದರು.
ಮನವಿ:
ಪರಿಸರ ದಿನಾಚರಣೆ ಆಚರಿಸುತ್ತಿರುವ ಈ ಪಾರ್ಕಿನಲ್ಲಿ ಕುಡಕರ ಹಾವಳಿ ಹೆಚ್ಚಿದ್ದು ಪಾರ್ಕಿನ ತುಂಬಾ ಬಾಟಲಿಗಳು ಪ್ಲಾಸ್ಟಿಕ್ ಕವರ್ಗಳು ಬಿದ್ದಿವೆ. ಆಶ್ರಯ ಆಸ್ಪತ್ರೆ ಇದೇ ಪಾರ್ಕ್ ಎದುರಿಗೆ ಇದು, ರೋಗಿಗಳ ಸಂಭಂಧಿಗಳು ಬಂದು ಕೂರುವ ಸ್ಥಳವೂ ಆಗಿದೆ. ಪೋಲಿಸ್ ಅಧಿಕಾರಿಗಳು ಸ್ವಲ್ಪ ಗಮನ ಹರಿಸಿ ಇಲ್ಲಿ ಕೂತು ಕುಡಿದು ಎಲ್ಲವನ್ನೂ ಅಲ್ಲೇ ಎಸೆದು ಹೋಗುವ ಕುಡುಕರ ಹಾವಳಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಂಡದ ಅಧ್ಯಕ್ಷರಾದ ಮೀನಾಕ್ಷಿ ವೆಂಕಟೇಶ್, ಜಾನಪದ ಸಂಘಟಕ ಮಾಗನಹಳ್ಳಿ ಮಂಜುನಾಥ್, ತಿಪ್ಪೇಶ್ ಲಕ್ಕಿಕೋನಿ, ಶೋಭಾ ಮಂಜುನಾಥ್, ಗೀತಾಂಜಲಿ, ಉಪನ್ಯಾಸಕಿ ಮಮತಾ ಮತ್ತಿತರರು ಉಪಸ್ಥಿತರಿದ್ದರು. ಮಂಗಳಾ ಮಲ್ಲಿಕಾರ್ಜುನ್ ಸ್ವಾಗಸಿದರು, ಜ್ಯೋತಿ ದೀಪಕ್ ವಂದಿಸಿದರು.