‘ಎಲುಬಿಲ್ಲದ ನಾಲಗೆ ಹರಿಯಬಿಡಬೇಡಿ’

ರಾಜನಹಳ್ಳಿ ಶಿವಕುಮಾರ್ ಅವರಿಗೆ ವೀರಶೈವ ಮಹಾಸಭಾ ಗೌರವಯುತ ಸಲಹೆ – ಎಚ್ಚರಿಕೆ

ಸುದ್ದಿ360 ದಾವಣಗೆರೆ ಜ.3: ರಾಜಕೀಯ ವ್ಯಕ್ತತ್ವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಮೂಳೆ ಇಲ್ಲದ ನಾಲಗೆಯನ್ನು ಹಗುರವಾಗಿ ಹರಿಯಬಿಡಬಾರದು, ಧರ್ಮದ ವಿಚಾರವಾಗಿ ಹಾಗೂ ಹಿರಿಯರ, ರಾಷ್ಟ್ರೀಯ ಅಧ್ಯಕ್ಷರ ವಿಚಾರವಾಗಿ ಮಾತನಾಡುವಾಗ ಪೈಲ್ವಾನ್ ಶಿವಕುಮಾರ್‍ರವರು ಎಚ್ಚರದಿಂದ ಮಾತನಾಡುವಂತೆ ವೀರಶೈವ ಮಹಾಸಭಾ ವತಿಯಿಂದ ಗೌರವಯುತವಾದ ಸಲಹೆ ಮತ್ತು ಎಚ್ಚರಿಕೆಯನ್ನು ನೀಡಬಯಸುವುದಾಗಿ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರ ಕುರಿತು ಹಗುರವಾಗಿ ಮಾತನಾಡಿರುವ ಪೈಲ್ವಾನ್ ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಎಲ್ಲ ಜಾತಿ ಮತ ಧರ್ಮಗಳನ್ನು ಅಭಿಮಾನದಿಂದ ಕಾಣುವ ವ್ಯಕ್ತಿತ್ವ ಹೊಂದಿರುವ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟನಾಶಕ್ತಿಯನ್ನು ಹೊಂದಿರುವ ಶಾಮನೂರು ಶಿವಶಂಕರಪ್ಪರ ವಿರುದ್ಧ ಅವಹೇಳನಕರ ಮಾತುಗಳನ್ನಾಡಿರುವುದು ಖಂಡನೀಯ.

ತಂದೆ ಸಮಾನರಾದ, ಎಲ್ಲರಿಗೂ ಬೇಕಾದಂತಹ ವ್ಯಕ್ತಿಗೆ ಕ್ಷುಲ್ಲಕ ಮಾತುಗಳನ್ನಾಡುವುದು ಬಿಸಿ ರಕ್ತದ, ರಾಜಕೀಯವಾಗಿ ಬೆಳೆಯುತ್ತಿರುವ ಪೈಲ್ವಾನ್ ಶಿವಕುಮಾರ್ ಅವರಿಗೆ ಶೋಭೆ ತರುವುದಿಲ್ಲ. ಠೀಕೆ ಮಾಡುವುದು ಮುಖ್ಯವಲ್ಲ, ಠೀಕೆ ಟಿಪ್ಪಣಿಗಳು ಆರೋಗ್ಯಕರವಾಗಿರಬೇಕು. ದೊಡ್ಡವರನ್ನು ನಿಂದಿಸುವುದರ ಮೂಲಕ ತಾನು ದೊಡ್ಡವನಾಗುತ್ತೇನೆ ಎಂಬ ಭಾವನೆ ತಮ್ಮಲ್ಲಿದ್ದರೆ  ಆ ಭಾವನೆಯಿಂದ ಹೊರಬನ್ನಿ ಎಂದು ಕಿವಿಮಾತು ಹೇಳಿದರು.

ವನ್ಯಜೀವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕಟ್ಟಳೆ ಇದೆ. ಆದರೆ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಒಬ್ಬ ಧೀಮಂತ ವ್ಯಕ್ತಿಯನ್ನು ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕರಾಗಲು ಅರ್ಹರಲ್ಲ ಎಂಬರ್ಥದಲ್ಲಿ ಮಾತನಾಡುವುದನ್ನು ವೀರಶೈವ ಮಹಾಸಭಾ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿಯೂ ಇದು ಮುಂದುವರೆದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ವೀರಶೈವ ಮಹಾಸಭಾ ಎಚಚರಿಕೆ ನೀಡುವುದಾಗಿ ಕೆ.ಜಿ. ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ.ಜೆ., ಬುಳ್ಳಾಪುರ ವಿಶ್ವನಾಥ್, ಪ್ರಕಾಶ್, ಕೊರಟಿಗೆರೆ ಶಿವಕುಮಾರ್ ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!