ಎಲ್ಲಾ ಸ್ವಚ್ಛತಾ ಕಾರ್ಮಿಕರ ಖಾಯಮಾತಿಗೆ ಆಗ್ರಹ – ಪೌರ ಕಾರ್ಮಿಕ ದಿನಾಚರಣೆ ಬಹಿಷ್ಕಾರದ ಎಚ್ಚರಿಕೆ

ಸುದ್ದಿ360 ದಾವಣಗೆರೆ, ಸೆ. 21: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಸೆ.23ರಂದು ನಡೆಯಲಿರುವ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಕಾರ್ಯಕ್ರಮ ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿರ ಮಹಾ ಸಂಘ ಸರಕಾರವನ್ನು ಎಚ್ಚರಿಸಿದೆ.

ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಎಲ್. ಎಂ. ಹನುಮಂತಪ್ಪ ಮಾತನಾಡಿ,

11,133 ಪೌರ ಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಲಾಗಿದೆ. ಹಿಂದೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ನಡೆಸಿದ ವೇಳೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಪೌರಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಿರುವುದಾಗಿ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ…

ಕೇವಲ ಪೌರಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಲು ಮುಂದಾಗಿರುವ ಸರಕಾರದ ನೀತಿಯು ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ ಎಂಬಂತಿದೆ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 49 ಜನ ವಾಲ್ ಮ್ಯಾನ್‌ಗಳು, 245 ಜನ ನೇರ ಪಾವತಿ ಪೌರಕಾರ್ಮಿಕರು, 10 ಜನ ಸ್ಮಶಾನ ಕಾವಲುಗಾರರು, 200 ಮಂದಿ ಕಸದ ವಾಹನಗಳ ಚಾಲಕರು ಸೇರಿ ರಾಜ್ಯಾದ್ಯಂತ ಸಾವಿರಾರು ಕಾರ್ಮಿಕರು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರನ್ನು ಕಡೆಗಣಿಸಲಾಗಿದೆ. ಸರಕಾರ ಈ ತೀರ್ಮಾದಿಂದ ತಕ್ಷಣವೇ ಹಿಂದೆ ಸರಿದು ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಲ, ಮೂತ್ರ, ಕಸ ಬಾಚಿ ಅನಾರೋಗ್ಯದಿಂದ ನರಳುತ್ತಿರುವ ಪೌರಕಾರ್ಮಿಕರಿಗೆ ಮೊದಲು ಆರೋಗ್ಯ ತಪಾಸಣೆ ಶಿಬಿರದ ಅವಶ್ಯಕತೆ ಇದೆ. ಹೀಗಿರುವಾಗ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಕ್ರೀಡಾಕೂಟ ಯಾವ ಪುರುಷಾರ್ಥಕ್ಕೆ ನಡೆಸುತ್ತಿದ್ದಾರೆ. . .? ಪೌರಕಾರ್ಮಿಕರಗೆ ಆರೋಗ್ಯ ತಪಸಣೆ ಶಿಬಿರ ಮತ್ತು ಸುರಕ್ಷತಾ ಪರಿಕರ ವಿತರಣೆ, ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ಮನೆಗಳು ಪೂರ್ತಿಯಾಗಿ ಹಾಳಾಗುವುದರೊಳಗೆ ಪೌರಕಾರ್ಮಿಕರಿಗೆ ನೀಡಬೇಕು ಇವು ತುರ್ತಾಗಿ ಆಗಬೇಕಿದೆ.

ಬಿ.ಎಚ್. ವೀರಭದ್ರಪ್ಪ, ಪೌರಕಾರ್ಮಿಕರ ಸಂಘದ ಜಿಲ್ಲಾಕಾರ್ಯಾಧ್ಯಕ್ಷ.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ನೀಲಗಿರಿಯಪ್ಪ, ಪದಾಧಿಕಾರಿಗಳಾದ ಎಲ್. ಜಿ. ಬಸವರಾಜ್, ಎಲ್. ಎಚ್. ಸಾಗರ್, ದುಗ್ಗೇಶ್ ಎಂ. ಆರ್, ಕಾಂತರಾಜು, ಓಮೇಶ್, ಮತ್ತೂರಮ್ಮ ಇತರರು ಇದ್ದರು.

ತಿಂಗಳ ಸಂಬಳಕ್ಕೆ ಲಂಚದ ಆರೋಪ. . .

ಸ್ವಚ್ಛತೆ ವಿಷಯದಲ್ಲಿ ಪಾಲಿಕೆಯಲ್ಲಿ ಒಂದು ರೀತಿಯ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ದೂರಿದ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ಎಲ್. ಎಚ್. ಸಾಗರ್, ಗುತ್ತಿಗೆ ಆಧಾರದಲ್ಲಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು ತಿಂಗಳ ಸಂಬಳ ಪಡೆಯಲು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೇಕ್ಟರ್‌ಗಳಿಗೆ 500 ರೂ. ಲಂಚ ನೀಡಬೇಕು. ಇಲ್ಲದಿದ್ದರೆ ಸಮಸ್ಯೆ ಮಾಡುತ್ತಾರೆ ಎಂದು ಆರೋಪಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!