ಸುದ್ದಿ360, ದಾವಣಗೆರೆ, ಜು.08: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ 150 ದಿನಗಳಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಜು.11ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾದಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸ್ವಾಭಿಮಾನಿ ಎಸ್‌ಸಿ-ಎಸ್‌ಟಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಹೊದಿಗೆರೆ ರಮೇಶ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ನಾಗಮೋಹನ್ ದಾಸ್ ವರದಿಯಂತೆ ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ವಾಲ್ಮೀಕಿ ಶ್ರೀಗಳ ಧರಣಿ ಸತ್ಯಾಗ್ರಹಕ್ಕೆ ಸರಕಾರ ಸ್ಪಂದಿಸದೇ ಇರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಮಾತ್ರ ಸಮುದಾಯದ ಜನತೆಗೆ ಘೋರ ಅನ್ಯಾಯ ಮಾಡಲಾಗುತ್ತಿದೆ. ಉಳಿದಂತೆ ಕೆಲವು ರಾಜ್ಯಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಿಸಿ ಆದೇಶಿಸಲಾಗಿದೆ. ಶ್ರೀಗಳು ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಹೋರಾಟ ಹತ್ತಿಕ್ಕುವ ಪ್ರಯತ್ನ ಸರಕಾರದಿಂದ ನಡೆಯುತ್ತಿದೆ. ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಸರಕಾರ ಯಥಾವತ್ತಾಗಿ ಜಾರಿಗೊಳಿಸಬೇಕು ಹಾಗೂ ವಾಲ್ಮೀಕಿ ಶ್ರೀಗಳ ಬೇಡಿಕೆಗಳನ್ನು ಬೇಷರತ್ತಾಗಿ ಈಡೇರಿಸಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸುವುದಾಗಿ ಅವರು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ತಿಳಿಸಲು ಅವಕಾಶವಿದೆ. ಆದರೆ ಒಂದು ಬೃಹತ್ ಸಮುದಾಯಕ್ಕಾಗಿ ಹೋರಾಟ ಮಾಡುತ್ತಿರುವ ಸ್ವಾಮೀಜಿಯವರ ಬಗ್ಗೆ ಅವಹೇಳನಕಾರಿ ಮಾತನಾಡುವುದು ಸರಿಯಲ್ಲ. ವಾಲ್ಮೀಕಿ ಶ್ರೀಗಳ ಬಗ್ಗೆ ಕೆಲವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಇದನ್ನು ಎಸ್‌ಸಿ, ಎಸ್‌ಟಿ ಸಮುದಾಯಗಳು ಎಂದೂ ಸಹಿಸುವುದಿಲ್ಲ. ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ 17 ಶಾಸಕರು, 3 ಎಂಎಲ್‌ಸಿಗಳು ಹಾಗೂ ಇಬ್ಬರು ಸಂಸದರಿದ್ದು, ಅವರೆಲ್ಲರೂ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದರೆ ಶ್ರೀಗಳ ಹೋರಾಟ ಸಮುದಾಯಕ್ಕಾಗಿ ಎಂಬುದನ್ನು ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು ಎಂದು ರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣ. ಹೆಗ್ಗೆರೆ ರಂಗಪ್ಪ, ನವೀನ್, ತಿಮ್ಮಣ್ಣ, ಹನುಮಂತಪ್ಪ, ರಾಘವೇಂದ್ರ ಪಾಟೀಲ್, ಪ್ರವೀಣ್, ಚೌಡಪ್ಪ, ನಾಗರಾಜ್ ಇದ್ದರು.