ಸುದ್ದಿ360 ದಾವಣಗೆರೆ, ಜು.26: ಕಾರ್ಗಿಲ್ ವಿಜಯ ದಿವಸ್ ಸಂಭ್ರಮ ನಗರದೆಲ್ಲೆಡೆ ಕಳೆಗಟ್ಟಿತ್ತು. ಸಂಭ್ರಮಾಚರಣೆ ಹಾಗೂ ವಿಜಯೋತ್ಸವಕ್ಕೆ ಕಾರಣರಾದ ಯೋಧರಿಗೆ ಗೌರವ ನಮನ ಅರ್ಪಿಸುವ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆಯಿಂದ ಮಂಗಳವಾರ ಬೈಕ್ ರ್ಯಾಲಿ ಜರುಗಿತು.
ನಗರದ ಹೈಸ್ಜೂಲ್ ಮೈದಾನದಲ್ಲಿ ಹೊರಡಲು ಸಿದ್ಧವಾಗಿದ್ದ ಬೈಕ್ ರ್ಯಾಲಿಗೆ ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಹಾಗೂ ಮಾಜಿ ಮೇಯರ್ ಎಸ್.ಟಿ. ವೀರೇಶ್ ತ್ರಿವರ್ಣ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ಮಾಜಿ ಮೇಯರ್ ಎಸ್ ಟಿ. ವೀರೇಶ್ ಮಾತನಾಡಿ, ಕಳೆದ 24 ವರ್ಷಗಳ ಹಿಂದೆ ಕಾರ್ಗಿಲ್ ನಂತಹ ದುರ್ಗಮ ಪ್ರದೇಶದಲ್ಲಿ ಪಾಕಿಸ್ತಾನದ ನುಸುಳುಕೋರರು ಅಕ್ರಮವಾಗಿ ನಮ್ಮ ನೆಲವನ್ನು ವಶಪಡಿಸಿಕೊಂಡಿದ್ದರು. ಭಾರತ ಸೇನೆ ಪ್ರತಿಕೂಲ ಹವಾಮನ ಹೊಂದಿರುವ ಇಂತಹ ದುರ್ಗಮ ಪ್ರದೇಶದಲ್ಲಿಯೂ ಕಾರ್ಯಾಚರಣೆ ನಡೆಸಿ ನುಸುಳುಕೋರರನ್ನು ಬಗ್ಗುಬಡಿಯಿತು. ಈ ವಿಜಯೋತ್ಸವಕ್ಕೆ ಕಾರಣರಾದ ಯೋಧರಿಗೆ ನಮನಗಳನ್ನು ಸಲ್ಲಿಸುವ ಮತ್ತು ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ದೇಶ ಕಾಯುತ್ತಿರುವ ಯೋಧರಿಗೆ ಗೌರಪೂರ್ವಕ ನಮನಗಳನ್ನು ಸಲ್ಲಿಸೋಣ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸೇನೆಯ ನಿವೃತ್ತ ಯೋಧ ಮಂಜಾನಾಯ್ಕ, ಎಂಥಹ ಕಠಿಣ ಪರಿಸ್ಥಿತಿಯಲ್ಲಿಯೂ ನಮ್ಮ ಸೇನೆ ಹೋರಾಡಿ ಜಯ ಸಾಧಿಸಬಲ್ಲುದು ಎಂಬುದಕ್ಕೆ ಕಾರ್ಗಿಲ್ ಕಾರ್ಯಾಚರಣೆಯೇ ಸಾಕ್ಷಿ. ಪ್ರತಿಕೂಲ ಹವಾಮಾನ ಇದ್ದರೂ ನಮ್ಮ ಸೈನಿಕರು ಎದೆಗುಂದದೆ ಶತೃಪಡೆಯನ್ನು ಹಿಮ್ಮೆಟ್ಟಿಸಿ ಜಯ ಸಾಧಿಸಿದ್ದು ಶ್ಲಾಘನೀಯ ಕಾರ್ಯ ಎಂದು ವೀರಯೋಧರ ಸ್ಮರಿಸಿದರು.
150 ಎನ್ ಫೀಲ್ಡ್ ಬುಲೆಟ್ ಗಳೊಂದಿಗೆ ಹೊರಟ ತಿರಂಗ ರ್ಯಾಲಿ ನಗರದಲ್ಲಿ ಸುಮಾರು 15 ಕಿ,ಮೀ ವರೆಗೆ ಸಾಗಿ ಅಮರ್ ಜವಾನ್ ಪಾರ್ಕ್ ತಲುಪಿತು. ಕಾರ್ಯಕರ್ತರು ಅಮರ್ ಜವಾನ್ ಪಾರ್ಕ್ ನಲ್ಲಿ ಪುಷ್ಪನಮನ ಸಲ್ಲಿಸಿದರು.
ರ್ಯಾಲಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಟೀ ಶರ್ಟ್ ನೀಡಲಾಗಿತ್ತು. ರ್ಯಾಲಿಯಲ್ಲಿ ದೇಶಭಕ್ತಿ ಮತ್ತು ಹುತಾತ್ಮ ಯೋಧರಿಗೆ ನಮಿಸುವ ಘೋಷಣೆಗಳು ಮೊಳಗಿದವು.
ನಗರದ ವೃತ್ತಒಂದಕ್ಕೆ ಕರ್ನಲ್ ರವೀಂದ್ರನಾಥ್ ಹೆಸರನ್ನಿಡುವ ಮೂಲಕ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ದಾವಣಗೆರೆ ಮಹಾನಗರ ಪಾಲಿಕೆಯ ದೇಶಪ್ರೇಮಕ್ಕೆ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೇರಣ ಸಂಸ್ಥೆಯ ಯೋಗೇಶ್, ಜಗದೀಶ್, ಪವನ್, ವಿಶ್ವಾಸ್, ಮಹೇಶ್ ಶೆಟ್ಟಿ, ವಿಶ್ವನಾಥ್, ಅರುಣ್, ವಿರುಪಾಕ್ಷಿ ಸೇರಿದಂತೆ ನೂರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.