ಗೋಲ್ಡನ್ ಮೆಮೋರೀಸ್‍ಗೆ ಮರುಜೀವ ನೀಡಿದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಗೋಲ್ಡನ್ ಗ್ರೂಪ್
ಸುದ್ದಿ360 ದಾವಣಗೆರೆ, ಜೂ.19: ಕಾಲೇಜು ದಿನಗಳ ನೆನಪುಗಳು ವ್ಯಕ್ತಿಯ ಜೀವನದಲ್ಲಿ ಸದಾ ಹಚ್ಚ ಹಸಿರಾಗಿರುತ್ತವೆ. ಇವು ಜೀವನದ ಕಡೆಯವರೆಗೂ ನೆನಪಿನಲ್ಲಿ ಇರುವಂತವುಗಳಾಗಿದ್ದು, ಸುವರ್ಣ ಕಾಲವಿದ್ದಂತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯಪಟ್ಟರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ 1989-90ನೇ ಸಾಲಿನ ವಿದ್ಯಾರ್ಥಿಗಳ ಗೋಲ್ಡನ್ ಮೆಮೋರಿಸ್ ಗ್ರೂಪ್ ವತಿಯಿಂದ ನಗರದ ಎಸ್.ಎಸ್. ಬಡಾವಣೆಯಲ್ಲಿನ ಆಫೀಸರ್ಸ್ ಕ್ಲಬ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಸ್ನೇಹಿತರನ್ನು ಒಂದೆಡೆ ಸೇರಿಸುವ ಮೂಲಕ 30 ವರ್ಷಗಳ ಹಿಂದೆ ಘಟಿಸಿದ ಮಧುರ ನೆನಪುಗಳನ್ನು ಮೆಲುಕು ಹಾಕಲು ಸ್ನೇಹ ಸಮ್ಮಿಲನ ದ ರೀತಿಯ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ. 90ರ ದಶಕದ ಎಲ್ಲಾ ಸ್ನೇಹಿತರು ಒಂದೆಡೆ ಸೇರಿ ಪರಸ್ಪರ ನೆನಪುಗಳನ್ನು ಹಂಚಿಕೊಳ್ಳುವುದು, ಕಾಲೇಜಿನಲ್ಲಿ ಕಳೆದ ಕ್ಷಣಗಳು, ಅಲ್ಲಿದ್ದ ಸ್ನೇಹಿತರ ನೆನಪಿಸಿಕೊಳ್ಳುವ ಆ ಸಂಭ್ರಮ ವಿವರಣೆಗೆ ನಿಲುಕದ್ದು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾಸ್ಯ ಕಲಾವಿದ ನರಸಿಂಹ ಜೋಷಿ, ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡ ಮಾತನಾಡುವ ಶೈಲಿ ಮತ್ತು ವಿವಿಧ ರಾಜಕೀಯ ಮುಖಂಡರ ಮಾತಿನ ಅನುಕರಣೆ ಮಾಡುವ ಮೂಲಕ ನೆರೆದವರನ್ನು ನಗೆಸಾಗರದಲ್ಲಿ ತೇಲಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಪಿ. ಬಸವಕುಮಾರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್. ತಿಪ್ಪೇಸ್ವಾಮಿ ಪ್ರಾಸ್ತವಿಕ ಮಾತನಾಡಿದರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವೆ ಡಾ.ಟಿ.ಎಂ. ಗೀತಾ, ಬಿಇಎ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಎಸ್. ರಾಜಶೇಖರ, ಡಾ.ಸಿ.ಆರ್. ಶಕೀಲಾಬಾನು, ವಿಶ್ರಾಂತ ದೈಹಿಕ ನಿರ್ದೇಶಕ ಎಸ್. ಓಂಕಾರಪ್ಪ, ಪೋಸ್ಟ್ ಮಾಸ್ಟರ್ ಹರೀಶ್, ಪಿ.ಎಸ್. ಸಂಗಮೇಶ್, ಸುಭಾಷ್ ಎಲಿ ಇತರರು ಇದ್ದರು.