ಕೆಐಎ ನಲ್ಲಿ ಶೀಘ್ರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜೂ. 24: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲಿಯೇ
ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಲು ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವದೆಹಲಿಯಿಂದ ಇಂದು ಹಿಂದಿರುಗಿದ ಸಂದರ್ಭದಲ್ಲಿ ಬೆಂಗಳೂರು ವಿಮಾನನಿಲ್ದಾಣದಲ್ಲಿರುವ ಕೆಂಪೇಗೌಡರ ಬೃಹತ್ ಮೂರ್ತಿಯ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಮಾನನಿಲ್ದಾಣದಲ್ಲಿರುವ ಕೆಂಪೇಗೌಡರ ಬೃಹತ್ ಮೂರ್ತಿ ಅಂತಿಮ ಘಟ್ಟಕ್ಕೆ ಬಂದಿದೆ. ಸ್ಟೀಲ್ ಮತ್ತು ಕಂಚಿನಿಂದ ಮಾಡಲಾಗಿರುವ ಸುಮಾರು 108 ಅಡಿ ಎತ್ತರದ ಪ್ರತಿಮೆ 220 ಟನ್ ತೂಕವಿದೆ. ಇಷ್ಟು ದೊಡ್ಡ ಕೆಂಪೇಗೌಡರ ಮೂರ್ತಿ ಇನ್ನೆಲ್ಲಿಯೂ ಇಲ್ಲ. ಅಂತಹ ವಿಶಿಷ್ಟ ಮೂರ್ತಿ ಇಲ್ಲಿ ಸ್ಥಾಪನೆಯಾಗಲಿದೆ. ಇದರ ಜೊತೆಗೆ ಸುತ್ತಲಿನ ಪ್ರದೇಶದ ಸೌಂದರ್ಯೀಕರಣವನ್ನೂ ಮಾಡಲಾಗುತ್ತಿದೆ. ಆದಷ್ಟೂ ಶೀಘ್ರದಲ್ಲಿ ಇದರ ಅನಾವರಣ ಮಾಡಬೇಕೆನ್ನುವುದು ನಮ್ಮೆಲ್ಲರ ಆಶಯ ಎಂದರು.

ನಾಡಿನ ಅಭಿವೃದ್ಧಿಯ ಸಂಕೇತ

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್ -2 ಉದ್ಘಾಟನಾ ಸಮಾರಂಭದ ಸಂದರ್ಭ ಇದರ ಅನಾವರಣ ಮಾಡಬೇಕೆಂಬ ಉದ್ದೇಶವಿದೆ. ಕೆಂಪೇಗೌಡರ ನಾಡಿದು. ಅವರ ಹೆಸರನ್ನೇ ವಿಮಾನನಿಲ್ದಾಣಕ್ಕೆ ಇಡಲಾಗಿದೆ. ಅವರ ನಾಡಿನಲ್ಲಿ ಅವರ ಬೃಹತ್ ಮೂರ್ತಿ ಬಹಳ ಸೂಕ್ತವಾಗಿದೆ. ಪ್ರತಿಮೆ ಇಡೀ ನಾಡಿನ ಅಭಿವೃದ್ಧಿಯ ಸಂಕೇತವೂ ಹೌದು. ಬೆಂಗಳೂರನ್ನು ಕಟ್ಟಿದ ನಾಡಪ್ರಭುಗಳ ದೂರದೃಷ್ಟಿಯ ಬೆಂಗಳೂರು ಆಧುನಿಕವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಅವರನ್ನು, ಅವರು ಮಾಡಿರುವ ಕೆಲಸಗಳನ್ನು, ಸ್ಮರಿಸುತ್ತಾ ಅವರ ಯೋಜನಾಶೈಲಿಯನ್ನು ಮಾರ್ಗದರ್ಶನವಾಗಿ ಇಟ್ಟುಕೊಂಡು ಈಗ ಮಾಡುತ್ತಿರುವ ಎಲ್ಲಾ ಕೆಲಸಕಾರ್ಯಕ್ಕೆ ಈ ಪ್ರತಿಮೆ ಸರ್ಕಾರದ ಎಲ್ಲ ಕಾರ್ಯಕ್ರಮಗಳಿಗೆ ಕೆಂಪೇಗೌಡರ ಮೂರ್ತಿ ಪ್ರೇರಣೆ ಮತ್ತು ಸ್ಪೂರ್ತಿಯನ್ನು ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಿರಿಯ ನಾಯಕರ ಜೊತೆ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಾಯಿತು ಎಂದರು.

admin

admin

Leave a Reply

Your email address will not be published. Required fields are marked *

error: Content is protected !!