ಸುದ್ದಿ360 ದಾವಣಗೆರೆ.ಜು.04: ರಾಷ್ಟ್ರಮಟ್ಟದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ನಗರದ ಸರ್ ಎಂವಿ ಕಾಲೇಜಿನ 11 ವಿದ್ಯಾರ್ಥಿಗಳು ರ್ಯಾಂಕ್ ಗಳಿಸುವ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಎಲ್ಲಾ 11 ವಿದ್ಯಾರ್ಥಿಗಳಿಗೆ ನಗರದ ಎಸ್.ಎ. ರವೀಂದ್ರನಾಥ ನಗರದಲ್ಲಿರುವ ಸರ್ ಎಂವಿ ಕಾಲೇಜಿನ ನೂತನ ಕ್ಯಾಪಸ್ನಲ್ಲಿ ಭಾನುವಾರ ಅಭಿನಂದನಾ ಸಮಾರಂಭ ಎರ್ಪಡಿಸಲಾಗಿತ್ತು.
ರ್ಯಾಂಕ್ ಪಡೆದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು |
ಟಿ.ಎಚ್. ಭರತೇಶ್ (108), ಎಸ್.ಆರ್. ಸಾಯಿ ಸಂಜಯ್ (174), ವಿನಯಕುಮಾರ್ (210), ಡಿ.ವಿ. ರಮ್ಯಶ್ರೀ ( 910), ಎಚ್.ಜೆ. ಧೀರಜ್ (1295), ಶ್ರೇಯಸ್ ಉಜ್ಜನಿಮಠ (1418), ಶ್ರೀನಿವಾಸ ಬಿ. ಮಾಲಿಪಾಟೀಲ್ (2000), ರಾಹುಲ್ ಸಿ. ಗಂಗನಗೌಡ (4018), ಎನ್. ಮೋಹನ್ ಕುಮಾರ್ (4433), ಎಚ್. ಅಭಿಷೇಕ್ (4706), ಎಂ.ಜಿ. ದೀಪನ್ (4797). |
ಈ ಸಂದರ್ಭದಲ್ಲಿ ಕಾಲೇಜು ಅಧ್ಯಕ್ಷ ಡಾ.ವಿ.ರಾಜೇಂದ್ರ ಮಾತನಾಡಿ, ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆವಿಪಿವೈ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಕೇವಲ 5000 ವಿದ್ಯಾರ್ಥಿಗಳು, ಐಐಎಸ್ಸಿ ಪ್ರವೇಶಾತಿಯ ಸಂದರ್ಶನ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿನಮ್ಮ ಕಾಲೇಜಿನ 11 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು. ಕೊರೊನಾ ಕಾರಣದಿಂದಾಗಿ ಈ ಬಾರಿ ನಿರೀಕ್ಷಿತ ಮಟ್ಟದ ಫಲಿತಾಂಶ ಬಂದಿಲ್ಲ. ಕಳೆದ ಬಾರಿ ಕೂಡ ಕಾಲೇಜಿನ ಹಲವು ವಿದ್ಯಾರ್ಥಿಗಳು ಸಂದರ್ಶನ ಸುತ್ತಿಗೆ ಆಯ್ಕೆಯಾಗಿ, ಇಬ್ಬರು ಐಐಎಸ್ಸಿಯಲ್ಲಿ ಸೀಟು ಪಡೆದಿದ್ದರು. ಮುಂದಿನ ವರ್ಷ ಕನಿಷ್ಠ 40 ಮಕ್ಕಳು ಕೆವಿಪಿವೈನಲ್ಲಿ ಅತ್ಯುನ್ನತ ರ್ಯಾಂಕ್ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಆಯ್ಕೆಯಾದವರಿಗೆ ಶುದ್ಧ ವಿಜ್ಞಾನ ಕಲಿಕೆಗೆ ರೂ. 80 ಸಾವಿರ ಸ್ಕಾಲರ್ ಶಿಪ್ ದೊರೆಯಲಿರುವುದಾಗಿ ತಿಳಿಸಿದರು.
ಟ್ರಸ್ಟಿ ಸುರೇಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಓದುವ ವಿಚಾರದಲ್ಲಿ ಗೊಂದಲ, ಒತ್ತಡಕ್ಕೆ ಒಳಗಾಗದೆ ಸಮಚಿತ್ತದಿಂದ ಪರೀಕ್ಷೆ ತಯಾರಿಯಲ್ಲಿ ತೊಡಗಬೇಕು. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಅಧ್ಯಯನ ನಡೆಸುವುದರಿಂದ ಪರೀಕ್ಷೆ ಎದುರಿಸುವುದು ಸುಲಭವಾಗಲಿದೆ ಎಂದು ಸಲಹೆ ನೀಡಿದರು.
ಈ ವೇಳೆ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಸೈಯದ್ ಸಂಶೀರ್, ದೇವರಾಜ್, ಶ್ರೀಕಾಂತ್, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.