‘ಕೈರುಚಿ’ ತೋರಿಸಿದ  ಎ.ವಿ.ಕೆ. ಕಾಲೇಜು ವಿದ್ಯಾರ್ಥಿನಿಯರು

ಸುದ್ದಿ360 ದಾವಣಗೆರೆ, ಜು.23: ಪನ್ನೀರ್ ಟಿಕ್ಕಾ, ಪಾವ್ ಬಾಜಿ, ವಡಾ ಪಾವ್, ಫ್ರೂಟ್ ಸಲಾಡ್, ಗ್ರೀನ್ ಸಲಾಡ್, ಮೊಳಕೆ ಕಾಳು ಸಲಾಡ್, ಸಿಹಿ ತಿನಿಸು, ಪಾನಿಪುರಿ, ಬ್ರೆಡ್ ಟೋಸ್ಟ್, ಪಲಾವ್ ಸೇರಿ ವಿವಿಧ ರೈಸ್ ಬಾತ್, ಫುಲ್ ಮೀಲ್ಸ್, ಮಿನಿ ಮೀಲ್ಸ್ ಸೇರಿ ತರಹೇವಾರಿ ತಿನಿಸುಗಳು. . .

ಇವುಗಳನ್ನೆಲ್ಲಾ ಸವಿಯುವಂತಹ ಫುಡ್ ಸ್ಟ್ರೀಟ್ ನಗರದ ಅಕ್ಕಮಹಾದೇವಿ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕಂಡು ಬಂತು. ಹೌದು, ಅಕ್ಷರಶಃ ಫುಡ್ ಸ್ಟ್ರೀಟ್ ಆಗಿ ಮಾರ್ಪಟ್ಟಿದ್ದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಗ್ಯಾಸ್ ಸಿಲಿಂಡರ್, ಸ್ಟವ್ ಇರಿಸಿಕೊಂಡು ವಿವಿಧ ಖಾದ್ಯಗಳನ್ನು ತಯಾರಿಸಿ ಬಂದವರಿಗೆ ತಮ್ಮ ಅಡುಗೆಯ ಕೈರುಚಿ ತೋರಿಸಿದರು.

ವಿದ್ಯಾರ್ಥಿನಿಯರು ತಯಾರಿಸಿದ ವಿವಿಧ ತಿನಿಸುಗಳನ್ನು ಸವಿಯುವ ಮೂಲಕ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಆಹಾರ ಮೇಳ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು, ಈಗ ಪುರುಷನಷ್ಟೇ ಸಮಾನವಾಗಿ ದುಡಿಯಲು ಆರಂಭಿಸಿದ್ದಾಳೆ. ಆದರೆ ಬಹಳಷ್ಟು ಹೆಣ್ಣು ಮಕ್ಕಳಿಗೆ ಅಡುಗೆ ಮನೆ ಕನಸಾಗಿದೆ. ಇಂತಹ ಕಾಲದಲ್ಲಿ ಹೆಣ್ಣುಮಕ್ಕಳಲ್ಲಿ ಅಡುಗೆ ಮಾಡುವ ಅಭಿರುಚಿ ಬೆಳೆಸುವಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ರಾಜ್ಯ ವಿವಿ ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಸಿ.ಎಚ್. ಮುರಿಗೇಂದ್ರಪ್ಪ ಮಾತನಾಡಿ, ಬೋಧನೆಯೊಂದೇ ಶಿಕ್ಷಣವಲ್ಲ. ಅದರೊಂಗಿದೆ ಕಾಲೇಜು ಮಟ್ಟದಲ್ಲಿ ಆಗಾಗ ಇಂತಹ ಆಹಾರ ಮೇಳಗಳು ನಡೆಯುತ್ತಿರಬೇಕು. ಇದರಿಂದ ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎವಿಕೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎ.ಬಿ. ಶಿವನಗೌಡ, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆದ ಆಹಾರಮೇಳದಲ್ಲಿ 50ಕ್ಕೂ ಹೆಚ್ಚು ಆಹಾರ ಮಳಿಗೆಗಳು ಇದ್ದವು. ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ವಿಧ ವಿಧವಾದ ತಿನಿಸುಗಳನ್ನು ಸವಿದರು.

admin

admin

Leave a Reply

Your email address will not be published. Required fields are marked *

error: Content is protected !!