ಸುದ್ದಿ360 ದಾವಣಗೆರೆ, ಜ.13: ರಾಜ್ಯದಲ್ಲಿ ಈ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯಗಳಿಗಾಗಿ 147 ಪ್ರಸ್ತಾವನೆಗಳು ಸರ್ಕಾರದ ಮುಂದಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಶೀಘ್ರದಲ್ಲೇ 28 ಕೋಟಿ ಅನುದಾನ ಬಿಡುಗಡೆ ಮಾಡಲಿದೆ. ಚಾಲ್ತಿಯಲ್ಲಿದ್ದ ಪ್ರಸ್ತಾವನೆಗಳಿಗಾಗಿ 14 ಕೋಟಿ ಅನುದಾನವನ್ನು ಈಗಾಗಲೇ ನೀಡಲಾಗಿದ್ದು, ಅಲ್ಪ ಸಂಖ್ಯಾತರ ಸರ್ವತೋಮುಖ ಪ್ರಗತಿಗಾಗಿ ವಿವಿಧ ಇಲಾಖೆಗಳಡಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿರುವುದಾಗಿ ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ. ಕೆನೆಡಿ ಶಾಂತಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ರಾಜ್ಯದ 22 ಜಿಲ್ಲೆಗಳ ಪ್ರವಾಸ ಮುಗಿಸಿ ಇಂದು ದಾವಣಗೆರೆಗೆ ಬಂದಿದ್ದು, ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಇದು ಸಾಕಷ್ಟು ಜನಕ್ಕೆ ತಿಳಿದಿಲ್ಲ. ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಕಟ್ಟಕಡೆಯ ಅಲ್ಪಸಂಖ್ಯಾತ ವ್ಯಕ್ತಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿರುವುದಾಗಿ ಅವರು ಹೇಳಿದರು.
ಧಾರ್ಮಿಕ ಸಂರಕ್ಷಣಾ ಕಾಯ್ದೆಯ ಅಪಪ್ರಚಾರ
ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಧಾರ್ಮಿಕ ಸಂರಕ್ಷಣಾ ಕಾಯ್ದೆಯನ್ನು, ಕೆಲವರು ರಾಜಕೀಯ ಲಾಭಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಯ್ದೆ ಬಗ್ಗೆ ಕ್ರೈಸ್ತ ಧರ್ಮ ಮುಖಂಡರಲ್ಲಿ ಯಾವುದೇ ಗೊಂದಲಗಳಿಲ್ಲ. ಬದಲಿಗೆ ಸಮ್ಮತಿ ಇರುವುದಾಗಿ ಹೇಳಿದ ಕೆನೆಡಿ ಅವರು ಕ್ರೈಸ್ತ ಸಮುದಾಯ ಬಿಜೆಪಿಯೊಂದಿಗೆ ಒಲವು ಹೊಂದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸ್, ಅಲ್ಪಸಂಖ್ಯಾತರ ಮತಗಳಿಂದಲೇ ಅಧಿಕಾರಕ್ಕೆ ಬಂದಿತ್ತಾದರೂ ಕ್ರೈಸ್ತ ಧರ್ಮೀಯರ ಅಭಿವೃದ್ಧಿಗೆ ಒಂದು ನಿಗಮ ಸ್ಥಾಪಿಸಲಿಲ್ಲ. ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ನಿಂದಲೂ ಆ ಕೆಲಸ ಆಗಲಿಲ್ಲ. ಆದರೆ ಬಿಜೆಪಿ ಸರಕಾರ ಕ್ರೈಸ್ತ ಅಭಿವೃದ್ಧಿ ಸಮಿತಿ ರಚಿಸಿ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿತು. ಕೇವಲ ನೆಗೆಟಿವ್ ಜಾತ್ಯತೀತತೆ ಪ್ರದರ್ಶಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್, ಬಿಎಸ್ವೈ ಬಳಿಕ 7 ವರ್ಷ ಅಧಿಕಾರದಲ್ಲಿದ್ದರೂ ಕ್ರೈಸ್ತ ಅಭಿವೃದ್ಧಿ ಮಂಡಳಿ ಪ್ರಸ್ತಾವನೆಯನ್ನು ತಿರುಗಿ ಕೂಡ ನೋಡಲಿಲ್ಲ ಎಂದು ಕೆನೆಡಿ ಶಾಂತಕುಮಾರ್ ದೂರಿದರು.
ಪ್ರಮುಖವಾಗಿ ಚರ್ಚ್ಗಳ ಜೀರ್ಣೋದ್ಧಾರ ಹಾಗೂ ಕ್ರೈಸ್ತ ಸಮುದಾಯ ಭವನಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. 100 ವರ್ಷಕ್ಕೂ ಹಳೆಯ ಚರ್ಚ್ಗಳ ಜೀರ್ಣೋದ್ಧಾರಕ್ಕೆ 50 ಲಕ್ಷ ರೂ. ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಇನ್ನು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಪಡೆಯುವ ಕ್ರೈಸ್ತ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10 ಲಕ್ಷ ರೂ.ನಂತೆ ಎರಡು ವರ್ಷಕ್ಕೆ 20 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ಇದರೊಂದಿಗೆ ಕ್ರೈಸ್ತ ಸಂಸ್ಥೆಗಳು ನಡೆಸುವ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೂ ಪ್ರತಿ ವರ್ಷ ಅನುದಾನ ನೀಡಲಾಗುತ್ತದೆ. ಅಲ್ಪಸಂಖ್ಯಾತರ ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳ ನಿರ್ವಹಣೆಯಲ್ಲಿ ತೊಡಕಾಗಿದ್ದರೆ ಅವುಗಳು ಸಂಪೂರ್ಣ ಆಡಳಿತ ವೆಚ್ಚವನ್ನು ಸಮಿತಿ ನೀಡುತ್ತದೆ ಎಂದು ಕೆನಡಿ ಶಾಂತಕುಮಾರ್ ಮಾಹಿತಿ ನೀಡಿದರು.
ಕ್ರೈಸ್ತ ಅಭಿವೃದ್ಧಿ ನಿಗಮ / ಮಂಡಳಿ
ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ಅಥವಾ ಮಂಡಳಿ ಸ್ಥಾಪಿಸುವ ಪ್ರಯತ್ನ ಜಾರಿಯಲ್ಲಿದ್ದು, ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ನಿಗಮ ಅಸ್ತಿತ್ವಕ್ಕೆ ಬರುವ ನಿರೀಕ್ಷೆಯಿದೆ ಎಂದು ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ. ಕೆನೆಡಿ ಶಾಂತಕುಮಾರ್ ತಿಳಿಸಿದರು.
2011ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಕ್ರೈಸ್ತ ಅಭಿವೃದ್ಧಿ ಸಮಿತಿ ಸ್ಥಾಪನೆಯಾಯಿತು. ವಾರ್ಷಿಕ 50 ಕೋಟಿ ರೂ. ಅನುದಾನದಿಂದ ಆರಂಭವಾದ ಈ ಸಮಿತಿ ಇಂದು 200 ಕೋಟಿ ರೂ. ಅನುದಾನ ಪಡೆಯುತ್ತಿದೆ. ಸಮಿತಿಯನ್ನು ನಿಗಮ ಅಥವಾ ಮಂಡಳಿಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ಬಿಎಸ್ವೈ ಅವಧಿಯಲ್ಲೇ ಆರಂಭವಾಗಿತ್ತು. ಅಷ್ಟರಲ್ಲಿ ಅವರ ಅಧಿಕಾರಾವಧಿ ಮುಗಿಯಿತು. ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಗಳು ನಿಗಮ, ಮಂಡಳಿ ಸ್ಥಾಪನೆ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಬಿಜೆಪಿ ಅಧಿಕಾರದಲ್ಲಿದ್ದು, ಸಮಿತಿಯನ್ನು ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ್, ವ್ಯವಸ್ಥಾಪಕ ಸಯ್ಯದ್ ಜುನೇದ್, ವಕ್ಫ್ ಮಂಡಳಿ ಜಿಲ್ಲಾ ಉಪಾಧ್ಯಕ್ಷ ಶಾಮೀರ್ ಆಲಂಖಾನ್ ಉಪಸ್ಥಿತರಿದ್ದರು.