ಸುದ್ದಿ360 ದಾವಣಗೆರೆ ಮಾ. 7: ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪರನ್ನು ಅಭಿಮಾನಿಗಳು ಸಮರವೀರರಂತೆ ಬಿಂಬಿಸಿ ಭವ್ಯ ಸ್ವಾಗತ ಮಾಡಿದ್ದಾರೆ.
ಕೆಎಸ್ ಡಿ ಎಲ್ ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿನ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ನವರು ತಮ್ಮ ಜಾಮೀನು ಅರ್ಜಿ ಮಂಜೂರು ಆದ ಕೆಲವೇ ಗಂಟೆಗಳಲ್ಲಿ ಚನ್ನಗಿರಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ ಇದ್ದೆ
ನಾನು ಚನ್ನಗಿರಿಯ ಮನೆಯಲ್ಲೇ ಇದ್ದೆ. ಆರೋಪ ಬಂದ ಹಿನ್ನೆಲೆಯಲ್ಲಿ ಜನಸಂಪರ್ಕದಿಂದ ದೂರ ಉಳಿದಿದ್ದೆ ಎಂದು ಹೇಳಿರುವ ವಿರೂಪಾಕ್ಷಪ್ಪನವರು ನನ್ನ ಮೇಲಿನ ದಾಳಿ ಉದ್ದೇಶಪೂರ್ವಕ ಕೃತ್ಯ ಎಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ಹಣ ನನ್ನದೇ ವಾಪಸ್ ಪಡೆಯುತ್ತೇನೆ
ನನ್ನದೇ ಆದ ವ್ಯಾಪಾರ ವಹಿವಾಟು ಇದೆ. 120 ಎಕರೆ ಅಡಿಕೆ ತೋಟ, ಕಮರ್ಷಿಯಲ್ ಕಾಂಪ್ಲೆಕ್ಸ್ ಸೇರಿದಂತೆ 3 ಕ್ರಷರ್ ಇವೆ. ಈಗ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿರುವ ಹಣ ನನ್ನದೇ ಆಗಿದ್ದು, ನನ್ನ ಬಳಿ ಕಂಪ್ಲೀಟ್ ಲೆಕ್ಕ ಇದೆ. ಆ ಹಣವನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಪಕ್ಷದಿಂದ ಉಚ್ಛಾಟನೆಗೊಂಡಿದ್ದೇನೆ
ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ತನ್ನನ್ನು ಉಚ್ಛಾಟನೆ ಮಾಡಿರುವುದಾಗಿ ಸ್ವತಃ ವಿರೂಪಾಕ್ಷಪ್ಪನವರೇ ಹೇಳಿದ್ದಾರೆ.
ಈ ಶಿಸ್ತುಕ್ರಮವನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಮೇಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಅತ್ಯಂತ ದೊಡ್ಡ ಪಕ್ಷವಾಗಿರುವ ಬಿಜೆಪಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಸರಿಯಾಗಿಯೇ ಇದೆ. ದೋಷಮುಕ್ತನಾಗಿ ಹೊರಬಂದು ಮತ್ತೆ ಬಿಜೆಪಿ ಪಕ್ಷವನ್ನು ಸೇರುವುದಾಗಿ ಅವರು ಹೇಳಿದ್ದಾರೆ.