ದಾವಣಗೆರೆಯಲ್ಲಿ ಮಾ.4ರಂದು ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶ
ಸುದ್ದಿ360, ದಾವಣಗೆರೆ, ಫೆ. 26: ಬರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಮಾತ್ರ ಸ್ಪರ್ಧಿಸುತ್ತಿಲ್ಲ. ಆಮ್ ಆದ್ಮಿ ಪಕ್ಷ ಕೂಡ ರಾಜ್ಯದ 224 ಕ್ಷೇತ್ರಗಳಲ್ಲಿಯೂ ‘ಪೊರಕೆ’ಯೊಂದಿಗೆ ಸ್ಪರ್ಧಿಸಲಿದೆ. ಪೊರಕೆ ಕೇವಲ ಮನೆ, ಬೀದಿಗಳನ್ನಷ್ಟೇ ಶುದ್ಧ ಮಾಡುವುದಿಲ್ಲ. ರಾಜಕೀಯವನ್ನು ಶುದ್ಧಮಾಡುವ ಪಣ ತೊಟ್ಟಿದೆ ಎಂದು ಎಎಪಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರದ ಉದ್ಘಾಟನಾ ಸಮಾರಂಭವು ಮಾರ್ಚ್ 4ರಂದು ದಾವಣಗೆರೆಯಲ್ಲಿ ನಡೆಯಲಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶವನ್ನು ಅಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವತ್ ಸಿಂಗ್ ಮಾನ್ ಉದ್ಘಾಟಿಸಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರಾಗಿ ದುಡಿಯುತ್ತಿರುವ 25 ಸಾವಿರ ಕಾರ್ಯಕರ್ತರು ಸೇರಿದಂತೆ ಬೃಹತ್ ಪ್ರಮಾಣದ ಸಾರ್ವಜನಿಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷ 9ನೇ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದ್ದು, ಕಾನೂನಾತ್ಮಕವಾಗಿ ಘೋಷಣೆ ಆಗಬೇಕಿದೆ ಎಂದು ತಿಳಿಸಿದ ಅವರು, ಪಕ್ಷವು ಕರ್ನಾಟಕದಲ್ಲಿ ಶೂನ್ಯದಿಂದ ಪ್ರಾರಂಭವಾಗುತ್ತಿದ್ದು, ಕೇವಲ ವಿಧಾನಸಭೆ ಚುನಾವಣೆಯಲ್ಲಿ ಮಾತ್ರವಲ್ಲದೆ, ತಾಲ್ಲೂಕು, ಜಿಲ್ಲಾ ಪಾಂಚಾಯ್ತಿ, ಮಹಾನಗರ ಪಾಲಿಕೆ, ಲೋಕಸಭೆ ಚುನಾವಣೆಗಳಲ್ಲೂ ಎಎಪಿ ಪ್ರತಿನಿಧಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಯೋಗ್ಯರನ್ನು ಕಣಕಿಳಿಸುವ ಪ್ರಯತ್ನ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.
75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿಯೂ ನಾವು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿದ್ದೇವೆ. ರಾಜ್ಯದಲ್ಲಿ ಭ್ರಷ್ಟಾಚಾರರಹಿತ ಇಲಾಖೆ ಯಾವುದಾದರೂ ಇದೆಯಾ ಎಂದು ದುರ್ಬಿನ್ ಹುಡುಕಿದರೂ ಸಿಗದೇ ಇರೋ ಸ್ಥಿತಿಯಲ್ಲಿ ನಾವಿದ್ದೇವೆ. ಈ ಸ್ಥಿತಿಗೆ ಇದುವರೆಗೂ ಆಡಳಿತ ನಡೆಸುತ್ತಾ ಬಂದ ಮೂರು ಪಕ್ಷಗಳೂ ಕಾರಣವಾಗಿದ್ದು, ಎಎಪಿ ರಾಜಕೀಯ ಶುದ್ದೀಕರಣ ಮಾಡಲಿದೆ ಎಂದರು.
ಈ ಮೂರೂ ಪಕ್ಷಗಳಿಂದ ಬೇಸತ್ತ ಜನತೆ ಪರ್ಯಾಯ ವ್ಯವಸ್ಥೆ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಜನರು ಅಪ್ಪಿಕೊಳ್ಳುವಂತಹ ವ್ಯವಸ್ಥೆಯನ್ನು ನಮ್ಮ ಪಕ್ಷ ನೀಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರುದ್ರಯ್ಯ ಹಿರೇಮಠ್, ಜಿಲ್ಲಾ ಅಧ್ಯಕ್ಷ ಚಂದ್ರು ಬಸವಂತಪ್ಪ, ಸಂಘಟನಾ ಕಾರ್ಯದರ್ಶಿ ಆದಿಲ್ ಖಾನ್, ಜಂಟಿ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾ ಕಾರ್ಯದರ್ಶಿ ಅರುಣ್ ಸೇರಿದಂತೆ ಇತರೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಾದ ಮಲ್ಲಿನಾಥ್, ಗೋವಿಂದ ರಾಜು, ಶ್ರೀಧರ ಪಾಟೀಲ್, ಬಿ. ರಾಜಶೇಖರ್, ಕಂಚಿಕೆರೆ ಜಯಣ್ಣ, ಇಂಧೂಧರ್ ಇದ್ದರು.