ಸುದ್ದಿ360, ದಾವಣಗೆರೆ, ಜು.21: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಜು. 22 ಮತ್ತು 23 ರಂದು ಕಾಲೇಜಿನ ವಾರ್ಷಿಕ ಸಮಾರಂಭ ‘ಮಲ್ಲಿಕಾ-22’ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ಬಹಳ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜು. 22ರಂದು ಬೆಳಿಗ್ಗೆ 9:00 ರಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದ್ದು, ಸಾಯಂಕಾಲ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಗುವುದು. ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಸದಸ್ಯರಾದ ಜಿಎಸ್ ಅನಿತ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
23ರಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ ಜಿಎಂ ಸಿದ್ದೇಶ್ವರ, ಹೆಸರಾಂತ ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಶ್ರೀಧರ್ ಸಾಗರ್, ಜಿ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಕುಮಾರಿ ವರ್ಣ ಚೌಹಾನ್, ಕುಮಾರಿ ನೇಹಾ ಶಾಸ್ತ್ರಿ ಮತ್ತು ಅಶ್ವಿನ್ ಶರ್ಮ ಭಾಗವಹಿಸಲಿದ್ದಾರೆ ಮತ್ತು ಕಾಲೇಜಿನ ಚೇರ್ಮನ್ ಆದ ಜಿಎಂ ಲಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನವನ್ನು ಶನಿವಾರದ ಸಂಜೆಯ ಕಾರ್ಯಕ್ರಮದಲ್ಲಿ ನೆರವೇರಿಸಲಾಗುವುದು ಮತ್ತು 12 ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳು ಬಂಗಾರದ ಪದಕವನ್ನು ಮತ್ತು 26 ವಿದ್ಯಾರ್ಥಿಗಳು ಬೆಳ್ಳಿಯ ಪದಕವನ್ನು ಸ್ವೀಕರಿಸಲಿದ್ದಾರೆ ಹಾಗೂ ಪಿಹೆಚ್ ಡಿ ಪಡೆದ ಪ್ರಾಧ್ಯಾಪಕರುಗಳಿಗೆ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ ಸುನಿಲ್ ಕುಮಾರ್ ಬಿ ಎಸ್ ತಿಳಿಸಿದರು.
ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು, ಜಿ ಸರಿಗಮಪ ಸ್ಪರ್ಧಿಗಳಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಮತ್ತು ವಿದ್ವಾನ್ ಶ್ರೀಧರ್ ಸಾಗರ್ ರವರಿಂದ ಲೈವ್ ಕನ್ಸರ್ಟ್ ಕಾರ್ಯಕ್ರಮಗಳು ನಡೆಯಲಿವೆ ಎಂದು ಇದೇವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ಇನ್ಫಾರ್ಮಶನ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ಮಲ್ಲಿಕಾ ಕಾರ್ಯಕ್ರಮದ ಸಂಯೋಜಕರಾದ ಡಾ ಬಿ ಎಸ್ ಸುನಿಲ್ ಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿಆರ್ ಉಪಸ್ಥಿತರಿದ್ದರು.