ಜೂ.19: ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವ – ಗುರುವಂದನೆ

ಸುದ್ದಿ360 ದಾವಣಗೆರೆ, ಜೂ.17: ನಡೆದಾಡುವ ದೇವರು ಖ್ಯಾತಿಯ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜಯಂತ್ಯುತ್ಸವ ಹಾಗೂ ಗುರುವಂದನೆ ಕಾರ್ಯಕ್ರಮ ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜು ಬಳಿಯ ಜಿಲ್ಲಾ ಗುರುಭವನದಲ್ಲಿ ಜೂ.೧೯ರಂದು ಬೆಳಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಹೆಚ್. ರಾಜಶೇಖರ್ ಗುಂಡಗಟ್ಟಿ ತಿಳಿಸಿದರು.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚುಟುಕು ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಚನ ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಸಮಾನ ಮನಸ್ಕರ ಸೇವಾ ಒಕ್ಕೂಟ, ಬೆಂಗಳೂರು, ಸ್ಪೂರ್ತಿ ಪ್ರಕಾಶನ ತೆಲಿಗಿ, ಯೋಗಾನಂದ ಯೋಗ ಕೇಂದ್ರ, ಭಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ಹಾಗೂ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ. ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕೇದಾರಲಿಂಗ ಶಿವಶಾಂತ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಮಾಚಿದೇವ ಸ್ವಾಮೀಜಿ, ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಫಾದರ್ ಡಾ. ಅಂತೋನಿ ಪೀಟರ್ ಉಪಸ್ಥಿತರಿರುವರು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ‘ಭಕ್ತಿ ಕುಸುಮಾಂಜಲಿ’ ಪುಸ್ತಕ ಬಿಡುಗಡೆ ಮಾಡುವರು. ಎಚ್.ಎಸ್. ಸತ್ಯಭಾಮಾರ ’ಅಂತರ್ಪಟ’ ಕೃತಿಯನ್ನು ಶಾಸಕ ಎಸ್‌ಎ ರವೀಂದ್ರನಾಥ್ ಲೋಕಾರ್ಪಣೆ ಮಾಡುವರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿ ಸ್ವಾಮಿ, ಮೇಯರ್ ಜಯಮ್ಮ ಗೋಪಿನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ದೂಡ ಅಧ್ಯಕ್ಷ ಕೆ.ಎಂ. ಸುರೇಶ್, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್ ಹಾಗೂ ಇತರರು ಭಾಗವಹಿಸುವರು. ಇದೇ ವೇಳೆ ವಿವಿಧ ಜಿಲ್ಲೆಗಳ ೧೧೫ ಸಾಧಕರಿಗೆ ’ಶ್ರೀ ಸಿದ್ಧಗಂಗಾ ಸೇವಾ ರತ್ನ’, ’ಶ್ರೀ ಸಿದ್ಧಗಂಗಾ ಕಲಾನಿಧಿ’, ’ರ್ಶರೀ ಸಿದ್ಧಗಂಗಾ ವೀರರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಭಗವಹಿಸಿ ಬಹುಮಾನ ಪಡೆದ ೧೭ ವಿದ್ಯಾರ್ಥಿಗಳಿಗೆ ’ಚಿತ್ರಕಲಾ ಸಿರಿ’ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ ನಿಕಟಪೂರ್ವ ಅಧ್ಯಕ್ಷ ಶಿವಯೋಗಿ ಹಿರೇಮಠ, ಯೋಗ ಶಿಕ್ಷಕ ಕೊಂಡಜ್ಜಿ ಆರ್. ಉಮೇಶ್, ಕವಯತ್ರಿ ಎಸ್.ಕೆ. ಸತ್ಯಭಾಮಾ, ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ಇದ್ದರು.

Leave a Comment

error: Content is protected !!