ಜೂ.24ಕ್ಕೆ ಬೆಳ್ಳಿತೆರೆಯ ಮೇಲೆ ‘ತ್ರಿವಿಕ್ರಮ’

ನಾಯಕ ವಿಕ್ರಮ್, ನಾಯಕಿ ಆಕಾಂಕ್ಷಾ ಶರ್ಮಾ ಡ್ಯಾನ್ಸ್ ಗೆ ಯುವಪಡೆ ಫಿದಾ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಮೊದಲ ಚಿತ್ರ

ದಾವಣಗೆರೆ, ಜೂ.13: ದಾವಣಗೆರೆ ಜನ ನಮ್ಮ ತಂದೆಯನ್ನು ಅತ್ಯಂತ ಪ್ರೀತಿಯಿಂದ ಆಧರಿಸಿದ್ದಾರೆ. ಅಣ್ಣನಿಗೂ ಅದೇ ಪ್ರೀತಿ ಸಿಕ್ಕಿದೆ. ಇದೇ 24ರಂದು ನಗರದ ಅಶೋಕ ಚಿತ್ರಮಂದಿರದಲ್ಲಿ ನನ್ನ ಮೊದಲ ಚಿತ್ರ ‘ತ್ರಿವಿಕ್ರಮ’ ಬಿಡುಗಡೆಯಾಗಲಿದೆ.  ಬೆಣ್ಣೆ ನಗರಿ ಜನ ನನಗೂ ಅಷ್ಟೇ ಪ್ರೀತಿ ಕೊಟ್ಟು ಬೆಂಬಲಿಸುತ್ತಾರೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿಐಇಟಿ, ಬಿಎಸ್‌ಸಿ, ನೂತನ್ ಸೇರಿ ನಾನಾ ಕಾಲೇಜುಗಳಿಗೆ ತೆರಳಿದ ಚಿತ್ರತಂಡ ವಿದ್ಯಾರ್ಥಿಗಳನ್ನು ಭೇಟಿಯಾಗಿ ಸಿನಿಮಾದ ಪ್ರಚಾರ ಮಾಡಿತು. ಈ ವೇಳೆ ನಾಯಕ ವಿಕ್ರಮ್ ಹಾಗೂ ನಾಯಕಿ ಆಕಾಂಕ್ಷಾ ಶರ್ಮಾ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು. ನಟ ವಿಕ್ರಮ್, ಚಿತ್ರದ ಡೈಲಾಗ್ ಹೊಡೆದು ಯುವ ಪಡೆಯ ಶಿಳ್ಳೆ, ಚಪ್ಪಾಳೆಗೆ ಪಾತ್ರರಾದರು.

ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಹಾಗೂ ನಟಿ ಆಕಾಂಕ್ಷಾಗೆ ಕೂಡ ತ್ರಿವಿಕ್ರಮ ಮೊದಲ ಚಿತ್ರವಾಗಿದ್ದು,  ಇದೇ ಜೂ.24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ  ಚಿತ್ರತಂಡ ಪ್ರಚಾರ ಕಾರ್ಯವನ್ನು ಭರದಿಂದ ಆರಂಭಿಸಿದೆ.

ಪ್ರಚಾರದ ವೇಳೆ ನೂತನ್- ಧವನ್ ಕಾಲೇಜಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಿಕ್ರಮ್ ರವಿಚಂದ್ರನ್, ದಾವಣಗೆರೆಗೆ ಬಂದರೆ ನಮ್ಮೂರಿಗೇ ಬಂದಂತಹ ಅನುಭವವಾಗುತ್ತದೆ ಎಂದರು.

ಒಬ್ಬ ಮಧ್ಯಮ ವರ್ಗದ ಹುಡುಗನ ಲವ್ ಜರ್ನಿ ಈ ಕಥೆಯ ಜೀವಾಳ. ಪ್ರೀತಿಗಾಗಿ, ಪ್ರೀತಿಸಿದ ಹೃದಯ ಹುಡುಕಿಕೊಂಡು ಒಬ್ಬ ಪ್ರೇಮಿ ಏನೆಲ್ಲಾ ಮಾಡಬಲ್ಲ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರೀಕರಣ ಬೆಂಗಳೂರು, ಕೊಡಚಾದ್ರಿ, ಉಡುಪಿ, ರಾಜಸ್ಥಾನ್, ಕಾಶ್ಮೀರ, ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆದಿರುವುದಾಗಿ ನಿರ್ದೇಶಕ ಸಹನಮೂರ್ತಿ ತಿಳಿಸಿದರು.

ಸೋಮಣ್ಣ ಟಾಕೀಸ್ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಚಿತ್ರಕ್ಕೆ, ರಾಮ್ಕೋ ಸೋಮಣ್ಣ ಹಣ ಹೂಡಿಕೆ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ. ತುಳಸಿ, ಸುಚೇಂದ್ರ ಪ್ರಸಾದ್, ಶಿವಮಣಿ, ಸಾಧುಕೋಕಿಲ, ರೋಹಿತ್ ರಾಯ, ಜಯಪ್ರಕಾಶ್, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ.

Leave a Comment

error: Content is protected !!