ಸುದ್ದಿ360 ದಾವಣಗೆರೆ: ಗೋಆಧಾರಿತ ಕೃಷಿ ಹಾಗೂ ಸಾವಯವ ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಮೀಪದ ಹೆಬ್ಬಾಳು ವಿರಕ್ತ ಮಠದಲ್ಲಿ ಜೂ.25, 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಆರ್. ಧನಂಜಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರ ಸಿದ್ಧಗಿರಿ ಮಠದ ಶ್ರೀ ಅದೃಷ್ಯ ಕಾಡುಸಿದ್ಧೇಶ್ವರ ಸ್ವಾಮೀಜಿ ಹಾಗೂ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಜೂ.25ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಜಲ ಮರುಪೂರಣ ಹಾಗೂ ಮಳೆನೀರು ಕೊಯ್ಲು ಕುರಿತು ಅಂತರ್ಜಲ ತಜ್ಞ ದೇವರಾಜ ರೆಡ್ಡಿ ತರಬೇತಿ ಕಾರ್ಯಾಗಾರ ನಡೆಸಿಕೊಡುವರು.
26ರಂದು ಬೆಳಗ್ಗೆ 10 ಗಂಟೆಗೆ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಅದೃಷ್ಯ ಕಾಡುಸಿದ್ಧೇಶ್ವರ ಸ್ವಾಮೀಜಿಯವರು, ಗೋಆಧಾರಿತ ಹಾಗೂ ಸಾವಯವ ಕೃಷಿ ಪದ್ಧತಿಯಿಂದ ರೈತರ ಅಭಿವೃದ್ಧಿ ಹಾಗೂ ಪಂಚ ಮಹಭೂತಗಳ ಅರಿವು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ. ದೂರದ ಊರುಗಳಿಂದ ಆಗಮಿಸುವ ರೈತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಸಹ ಇರಲಿದೆ. ಆಸಕ್ತ ರೈತರು ನೋಂದಣಿಗೆ ಹಾಗೂ ಕಾರ್ಯಕ್ರಮ ಕುರಿತ ಮಾಹಿತಿಗೆ ಮೊ: 99864 51541, 99726 03649 ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಪ್ರಕಾಶ್ ನೇರ್ಲಿಗೆ, ಚಿದಾನಂದ್, ಜಿ.ಡಿ. ಬಸವರಾಜ್, ಕೆ.ವೆಂಕಟೇಶ್ವರ ರಾವ್, ಅಶೋಕ್ ಇದ್ದರು.