ಸುದ್ದಿ360, ರಾಮನಗರ, ಜೂ.24: ಗಾನಸುಧೆ ಕಲಾ ಬಳಗ ವತಿಯಿಂದ ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನುಡಿನಮನ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಜೂ.26 ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳಗದ ಮೂರನೇ ವಾರ್ಷಿಕೋತ್ಸವ ಅಂಗವಾಗಿ ದಾವಣಗೆರೆ ಫ್ರೆಂಡ್ಸ್ ಮೆಲೋಡಿ ಆರ್ಕೆಸ್ಟ್ರಾ ಇವರು ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಲಿದ್ದಾರೆ. ಹಾಗೂ ನಮ್ಮನ್ನಗಲಿದ ಸ್ಥಳೀಯ ಕಲಾವಿದರಾದ ಮಂಜುಳ, ಗೀತಾ, ಪರಮೇಶ್ವರಪ್ಪ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಗುವುದು ಮತ್ತು ಹಿರಿಯ ಕಲಾವಿದರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಶೀಘ್ರವೇ ಕಲಾಮಂದಿರ ಪೂರ್ಣಗೊಳ್ಳಲಿ
ದಾವಣಗೆರೆ ಪಶು ಆಸ್ಪತ್ರೆ ಹಿಂಭಾಗ ಸುಮಾರು 4ಕೋಟಿ ರೂ. ವೆಚ್ಚದಲ್ಲಿ ಕಲಾಮಂದಿರ ನಿರ್ಮಾಣ ಕಾರ್ಯ ನಾಲ್ಕೈದು ವರ್ಷಗಳಿಂದ ನಡೆಯುತ್ತಲೇ ಇದ್ದು, ಇದುವರೆಗೂ ಮುಗಿದಿಲ್ಲ. ಸಂಸದರು, ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಶೀಘ್ರವೇ ಕಲಾಮಂದಿರ ಕೆಲಸ ಮುಗಿಸಿಕೊಂಡುವಂತೆ ಮನವಿ ಮಾಡಿದರು.
ರಾಜ್ಯದ 14 ಜಿಲ್ಲೆಗಳಲ್ಲಿ ರಂಗಮಂದಿರಗಳಿಲ್ಲ
ಸರ್ಕಾರದಿಂದ ಕೋಟಿ ಕೋಟಿ ಅನುದಾನ ಬಂದರೂ ರಾಜ್ಯದ 14 ಜಿಲ್ಲೆಗಳಲ್ಲಿ ರಂಗಮಂದಿರಗಳಿಲ್ಲ. ರಂಗಮಂದಿರ ನಿರ್ಮಾಣವಾದರೆ ಸಣ್ಣ ಪುಟ್ಟ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ಶಂಭುಲಿಂಗಪ್ಪ ಹೇಳಿದರು.
ಹಾಗೂ ದಾವಣಗೆರೆ ಸೇರಿದಂತೆ ಒಟ್ಟು 16 ಜಿಲ್ಲೆಗಳ ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 31 ಹಿರಿಯ ಕಲಾವಿದರನ್ನು ಗುರ್ತಿಸಿ, ಬಿರುದು ಸನ್ಮಾನ ಸಲ್ಲಿಸಲಾಗುವುದು ಎಂದುತಿಳಿಸಿದರು.
ಸಮಾರಂಭದ ಸಾನ್ನಿಧ್ಯವನ್ನು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಗಳು ವಹಿಸಲಿದ್ದಾರೆ. ಮಾಜಿ ಮೇಯರ್, ಹಾಲಿ ಪಾಲಿಕೆ ಸದಸ್ಯ ಬಿ.ಜಿ. ಅಜಯ್ ಕುಮಾರ್ ಉದ್ಘಾಟಿಸಲಿದ್ದು, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ, ಪಾಲಿಕೆ ಸದಸ್ಯ ಎಲ್. ಆರ್. ಶಿವಕುಮಾರ್ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಉದ್ಯಮಿ ಪಾಪಣ್ಣ ಉಪಸ್ಥಿತರಿರುವರು. ಜ್ಞಾನ ಸಾಗರ ಪಿಯು ಕಾಲೇಜು ಸಂಸ್ಥಾಪಕ ಕಾರ್ಯದರ್ಶಿ ಬಸವ ರಾಜ್ ಸಾಗರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ. ಪರಮೇಶ್ ಹಾಗೂ ಮಂಜುನಾಥ್ ಆವರಗೆರೆ ಇದ್ದರು.