ಜೂ.27 ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಚುನಾವಣೆ

ಸುದ್ದಿ360, ದಾವಣಗೆರೆ, ಜೂ.25: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ 2022-27ನೇ ಸಾಲಿನ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಘಟಕದ ಚುನಾವಣ ಪ್ರಕ್ರಿಯೆ ಇದೇ ಜೂನ್‍ 27ರಿಂದ ಪ್ರಾರಂಭವಾಗಿ ಜುಲೈ 24ರವರೆಗೆ ಮೂರ ಹಂತಗಳಲ್ಲಿ ನಡೆಯಲಿರುವುದಾಗಿ ಜಿಲ್ಲಾಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದು ಮತ್ತು ಸಹ ಶಿಕ್ಷಕರಲ್ಲಿ ಸ್ನೇಹ ಸೌಹಾರ್ಧತೆ, ಸಂಘಟನೆ ಬೆಳೆಸುವುದು. ಹಾಗೂ ನ್ಯಾಯಬದ್ಧವಾದ ಮೂಲಭೂತ ಬೇಡಿಕೆಗಳ ರಕ್ಷಣೆಗಾಗಿ ಕಾರ್ಯಕ್ರಮ  ರೂಪಿಸುವ ಉದ್ದೇಶದಿಂದ 1987ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದಲ್ಲಿ 65 ಸಾವಿರ ಸದಸ್ಯರನ್ನೊಳಗೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಸುರೇಶ್‍ ಟಿ. ಅಣಬೇರು ಮಾತನಾಡಿ, ಈ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿ 25 ಶಿಕ್ಷಕರಿಗೆ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಒಟ್ಟು 1714 ಶಿಕ್ಷಕರಿದ್ದು 70 ಜನ ನಿರ್ದೇಶಕರು ಈ ಚುನಾವಣೆಯಲ್ಲಿ ಆಯ್ಕೆಗೊಳ್ಳಲಿದ್ದಾರೆ. ಜೂನ್‍27ರಿಂದ ಜುಲೈ 9ರವರೆಗೆ ನಡೆಯಲಿರುವ ತಾಲ್ಲೂಕು ಹಂತದ ಚುನಾವಣೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಮತ್ತು ರಾಜ್ಯ ಪರಿಷತ್ತಿನ ಸದಸ್ಯರು ಹೀಗೆ 7 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು.

ಎರಡನೇ ಹಂತದಲ್ಲಿ ಜಿಲ್ಲಾ ಸಂಘಕ್ಕೆ ಜು.12ರಿಂದ ಜು.17ರವರೆಗೆ ಹಾಗೂ ಜು.18ರಿಂದ ಜು.24ರವರೆಗೆ ರಾಜ್ಯ ಹಂತದ ಚುನಾವಣೆ ನಡೆಯಲಿದೆ. ಜಿಲ್ಲಾ ಸಂಘಕ್ಕೆ ಮತ್ತು ರಾಜ್ಯ ಮಟ್ಟಕ್ಕೆ ತಲಾ 6 ಜನ ಪದಾಧಿಕಾರಿಗಳು ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಪದನಾಮದಲ್ಲಿ ಆಯ್ಕೆಗೊಳ್ಳಲ್ಲಿರುವುದಾಗಿ ತಿಳಿಸಿದರು.

ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಆಯ್ಕೆಗೊಂಡ ಅಧ್ಯಕ್ಷರು, ಖಜಾಂಚಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಪರಿಷತ್ತಿನ ಸದಸ್ಯರು ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಮತದಾನದ ಹಕ್ಕನ್ನು ಹೊಂದಿರುತ್ತಾರೆ.  ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ 1000 ರೂ. ಠೇವಣಿ ನಿಗಧಿಪಡಿಸಲಾಗಿದೆ. ಪ್ರತಿ ತಾಲ್ಲೂಕಿಗೆ ಒಬ್ಬರಂತೆ 7 ಜನ  ಚುನಾವಣಾಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಜಿಲ್ಲೆಯ ಎಲ್ಲ ಪ್ರೌಢಶಾಲಾ ಸಹ ಶಿಕ್ಷಕರು ಈ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಜೂ.27ರಿಂದ 30ರವರೆಗೆ ಬೆಳಗ್ಗೆ 11 ರಿಂದ ಸಂಜೆ 4.00ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಜು.1ನೇ ತಾರೀಖು ನಾಮ ಪತ್ರ ಹಿಂಪಡಿಕೆ ಮತ್ತು ನಾಮಪತ್ರ ಪರಿಶೀಲನೆ, ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. 3ನೇ ತಾರೀಖು ಅಗತ್ಯಬಿದ್ದಲ್ಲಿ ಚುನಾವಣೆ ನಡೆಯಲಿದೆ. ಈ ಎಲ್ಲಾ ಚುನಾವಣೆಗಳು ಬೆಳಿಗ್ಗೆ 11 ರಿಂದ ಸಂಜೆ 4.00 ರವರೆಗೆ ನಿಗಧಿತ ದಿನಾಂಕದಂದು ನಡೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮುಬಾರಕ್‍ ಅಲಿ,    ಜಿಲ್ಲಾ ಖಜಾಂಚಿ ದ್ವಾರಕೇಶ್‍ ನಾಯಕ್‍, ಸಹಕಾರ್ಯದರ್ಶಿ ಈಶಪ್ಪ ಬೂದಿಹಾಳ್‍, ದಾವಣಗೆರೆ ದಕ್ಷಿಣ ಘಟಕದ ಅಧ್ಯಕ್ಷ ಎಲ್‍ ಗಂಗಾಧರ್‍ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!