ಸುದ್ದಿ360 ಬೆಳಗಾವಿ, ಜ.10: ಬೀಸುವ ದೊಣ್ಣಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿರುವ ಸರಕಾರ ಮೀಸಲಾತಿ ಹುಸಿ ಭರವಸೆ ಕೊಡುವ ಮೂಲಕ ಹೋರಾಟದ ದಾರಿ ತಪ್ಪಿಸುತ್ತಿದೆ. ಸರಕಾರಕ್ಕೆ ಬಿಸಿ ಮುಟ್ಟಿಸಲು ಜ.13 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿಯಲ್ಲಿನ ಮನೆ ಮುಂದೆ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಂದು ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಣಿದ ಸರಕಾರ ಸಮುದಾಯಕ್ಕೆ ಪ್ರತ್ಯೇಕ ಗುಂಪು ರಚಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಭರವಸೆ ಕೊಟ್ಟು ಹೋರಾಟ ನಿಲ್ಲಿಸಿದ್ದರು. ನಂತರ ಡಿ.29 ರಂದು ಸಚಿವ ಸಂಪುಟ ಸಭೆ ಕರೆದು ಕೈಗೊಂಡ ನಿರ್ಧಾರಗಳ ಕುರಿತು ಇಂದಿಗೂ ಅಧಿಸೂಚನೆ ಹೊರಡಿಸದೆ ಸ್ವತಃ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋರಾಟದ ದಿಕ್ಕು ತಪ್ಪಿಸಿದ್ದಾರೆ.
ಶಿಗ್ಗಾವಿ ಹೋರಾಟವೇ ಸಂಕ್ರಾಂತಿ ಆಚರಣೆ
ಸಚಿವ ಸಂಪುಟದ ನಿರ್ಣಯಗಳನ್ನು ನಾವು ತಿರಸ್ಕರಿಸಿದ್ದೇವೆ. ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುವ ನಿರ್ಧಾರ ಮಾಡಿದ್ದೇವೆ. ಜ.13 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಿಎಂ ಮನೆಯಿಂದಲೇ ಹೋರಾಟ ಆರಂಭಿಸುತ್ತೇವೆ. ಶಿಗ್ಗಾವಿ ಹೋರಾಟವನ್ನೆ ಸಂಕ್ರಾಂತಿ ಎಂದು ಆಚರಿಸೋಣ. ನ್ಯಾಯ ಸಿಕ್ಕರೆ ಮಾತ್ರ ನಿಜವಾಗಿ ಹಬ್ಬ ಆಚರಿಸೋಣ ಎಂದು ಸಮುದಾಯ ಜನತೆಗೆ ಸೂಚನೆ ನೀಡಲಾಗಿದೆ. ಹುಸಿ ಭರವಸೆ ಕೊಟ್ಟಿರುವ ಸರಕಾರ ಮಾತು ಉಳಿಸಿಕೊಳ್ಳಲು ಜ.12 ರ ವರೆಗೆ ಇನ್ನೂ 48 ಗಂಟೆಗಳ ಕಾಲಾವಕಾಶವಿದೆ. ತಕ್ಷಣ ಮೀಸಲಾತಿ ವಿಷಯವಾಗಿ ಕೈಗೊಂಡ ನಿರ್ಣಯಗಳ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಶ‍್ರೀಗಳು ಎಚ್ಚರಿಕೆ ನೀಡಿದರು.
ಅಡ್ಡಿಪಡಿಸುತ್ತಿರುವವರ ಪಟ್ಟಿ ನಮ್ಮ ಬಳಿ ಇದೆ
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಡ್ಡಿ ಮಾಡುತ್ತಿರುವ ಸಚಿವರು, ಶಾಸಕರು ಮತ್ತು ಪ್ರಭಾವಿಗಳ ಪಟ್ಟಿ ಕೂಡ ಶಿಗ್ಗಾವಿಯಲ್ಲಿ ನಡೆಯುವ ಸತ್ಯಾಗ್ರಹ ಸಂದರ್ಭದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಸರಕಾರದ ಜತೆಗೆ ಅಡ್ಡಿ ಮಾಡಿದವರ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ರೂಪರೇಷೆ ಕೂಡ ಕೈಗೊಳ್ಳಲಾಗುವುದು ಎಂದು ಬಸವಜಯ ಮೃತ್ಯಂಜಯ ಸ್ವಾಮೀಜಿ ಹೇಳಿದರು.
ಸಮುದಾಯ ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ಅಡವೇಶ ಇಟಗಿ, ಆರ್.ಕೆ.ಪಾಟೀಲ್, ರಾಮನಗೌಡ ಪಾಟೀಲ್, ರಾಜು ಮಗದುಮ್ಮ, ಗುಂಡು ಪಾಟೀಲ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.