ಜ.21, 22 ನಿರ್ಮಲ ತುಂಗಾ ಅಭಿಯಾನ – ಬೃಹತ್ ಪಾದಯಾತ್ರೆ

ಗಾಜನೂರಿನಿಂದ ಆರಂಭವಾಗುವ ಯಾತ್ರೆ ಪವಿತ್ರ ಕೂಡಲಿಯಲ್ಲಿ ಸಮಾರೋಪ

ವರದಿ: ಶ್ರೀನಿವಾಸ ಮೂರ್ತಿ ಕೆ.ಎಂ.

ಸುದ್ದಿ360 ಶಿವಮೊಗ್ಗ ಜ.20: ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಮಿತಿ, ಪರ್ಯಾವರಣ ಟ್ರಸ್ಟ್ ಹಾಗೂ ಶಿವಮೊಗ್ಗದ ವಿವಿಧ ಪರಿಸರಾಸಕ್ತರ ತಂಡಗಳ ಸಂಯುಕ್ತಾಶ್ರಯದಲ್ಲಿ ಜ.21 ಹಾಗೂ 22 ರಂದು ಗಾಜನೂರಿನಿಂದ ಶ್ರೀ ಕ್ಷೇತ್ರ ಕೂಡಲಿಯವರೆಗೆ ನಿರ್ಮಲ ತುಂಗಾ ಅಭಿಯಾನದ ಬೃಹತ್ ಪಾದಯಾತ್ರೆ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ. ಎಂ. ಕುಮಾರಸ್ವಾಮಿ ತಿಳಿಸಿದರು.

ನಗರದ ಮಥುರಾ ಪ್ಯಾರಡೈಸ್ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಗಂಗಾ ಸ್ನಾನಂ – ತುಂಗಾ ಪಾನಂ ಎಂಬ ನಾಣ್ಣುಡಿಗೆ ತದ್ವಿರುದ್ಧವಾಗಿ ಇಂದು ತುಂಗಾ ನದಿ ಅಪವಿತ್ರಗೊಂಡಿದೆ. ದಿನನಿತ್ಯ ಶಿವಮೊಗ್ಗ ನಗರದ ಕಲುಷಿತ ನೀರು ಯುಜಿಡಿ ಹಾಗೂ ರಾಜಕಾಲುವೆ ಮೂಲಕ ತುಂಗೆಯ ಒಡಲನ್ನು ಸೇರುತ್ತಿದೆ. ಆಧುನಿಕ ಕೃಷಿ ಪದ್ಧತಿ ಪರಿಣಾಮ ಕೀಟನಾಶಕಗಳಿಂದ ಕೃಷಿ ಭೂಮಿಯಿಂದ ಹರಿದು ಬಂದ ವಿಷಯುಕ್ತ  ನೀರು ನದಿಯನ್ನು ಸೇರುತ್ತಿರುವುದರಿಂದ ತುಂಗೆಯ ನೀರು ಇಂದು ಕುಡಿಯಲೂ ಯೋಗ್ಯವಿಲ್ಲ. ಅಲ್ಲದೆ ಮಲಿನಗೊಂಡಿರುವ ಪವಿತ್ರ ತುಂಗೆ ದೇವರ ಅಭಿಷೇಕಕ್ಕೂ ಬಳಸದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅವೈಜ್ಞಾನಿಕ ಗಣಿಗಾರಿಕೆಯಿಂದಾಗಿ ತುಂಗಾ ನದಿಯ ನೈಸರ್ಗಿಕ ಹರಿವಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದಾಗಿ ತಿಳಿಸಿದ ಅವರು, ತುಂಗೆಯ ಪಾವಿತ್ರ್ಯತೆ ಕಾಪಾಡದಿದ್ದರೆ ಭವಿಷ್ಯದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗುತ್ತದೆ. ಜಲವೆಂದರೆ ಬರಿ ನೀರಲ್ಲ. ಅದು ಪಾವನ ಗಂಗೆ ಹಾಗಾಗಿ ನದಿ ಪಾತ್ರದ ನಿವಾಸಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ನಿರ್ಮಲ ತುಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜ.21ರ ಬೆಳಿಗ್ಗೆ 7.30ಕ್ಕೆ ಗಾಜನೂರು ಡ್ಯಾಂನಲ್ಲಿ ತುಂಗೆಗೆ ಪೂಜೆ ಸಲ್ಲಿಸುವುದರ ಮೂಲಕ ಪಾದಯಾತ್ರೆ ಆರಂಭಗೊಳ್ಳಲಿದ್ದು, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಮಿತಿ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ ಚಾಲನೆ ನೀಡಲಿದ್ದಾರೆ.

ನಂತರ 9.30ಕ್ಕೆ ಗಾಜನೂರು, 12ಕ್ಕೆ ಹೊಸಹಳ್ಳಿಯಲ್ಲಿ, 3.30ಕ್ಕೆ ಅರಕೆರೆ ದೇವಸ್ಥಾನ ಆವರಣದಲ್ಲಿ ಸಭೆ ನಡೆದು ಅಲ್ಲಿಂದ ಸಾಗುವ ಪಾದಯಾತ್ರೆ ಹಳೆಮಂಡ್ಲಿ, ಸವಾಯಿಪಾಳ್ಯ, ಸೀಗೆಹಟ್ಟಿ ಮೂಲಕ ಸಂಜೆ 6ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಲಿದೆ. ಅಲ್ಲಿನ ಬಯಲು ರಂಗಮಂದಿರದಲ್ಲಿ ಕೆ.ಎನ್. ಗೋವಿಂದಾಚಾರ್ಯರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದು, ನಂತರ ಸಂವಾದ ಹಾಗೂ ತುಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರಿಗಳು ಅಂದು ರಾತ್ರಿ ಬೆಕ್ಕಿನ ಕಲ್ಮಠದಲ್ಲಿ ತಂಗಲಿದ್ದಾರೆ.

ಜ.22ರ ಬೆಳಿಗ್ಗೆ 8.30ಕ್ಕೆ ಮುಂದುವರೆಯುವ ಪಾದಯಾತ್ರೆ 9.30ಕ್ಕೆ ಹೊಳೆಬೆನವಳ್ಳಿ, 10.30ಕ್ಕೆ ಪಿಳ್ಳಂಗಿರಿ, ಮಧ್ಯಾಹ್ನ 12ಕ್ಕೆ ಓಪನ್ ಮೈಂಡ್ ವರ್ಲ್ಡ್ ಸ್ಕೂಲ್ ತಲುಪಿ ವಿಶ್ರಾಂತಿ ಪಡೆದು, 2.30ಕ್ಕೆ ಪಾದಯಾತ್ರೆ ಮುಂದುವರೆಯಲಿದೆ. 3.30ಕ್ಕೆ ಶ‍್ರೀ ಕ್ಷೇತ್ರ ಕೂಡಲಿಯಲ್ಲಿ ನದಿ ಸ್ವಚ್ಛತೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಸರ ಪ್ರೇಮಿ ಪ್ರೊ. ಎಲ್.ಕೆ. ಶ್ರೀಪತಿ, ಟ್ರಸ್ಟ್‍ನ  ಉಪಾಧ್ಯಕ್ಷ ಪ್ರೊ. ಎ.ಎಸ್. ಚಂದ್ರಶೇಖರ್, ನಿರ್ದೇಶಕರಾಧ ಎಂ. ಶಂಕರ್, ಡಾ. ಶ್ರೀಧರ, ಎಸ್. ಬಿ. ಅಶೋಕ್ ಕುಮಾರ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!