ದಾವಣಗೆರೆ ನಗರದ ಆಯ್ದ 68 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಸುದ್ದಿ360 ದಾವಣಗೆರೆ ಜ.3: ಡಾ ಹೆಚ್ ಎಫ್ ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಧಾರವಾಡ, ದಾವಣಗೆರೆ ಘಟಕದಿಂದ ಪುಸ್ತಕ ವಾಚನ ಸಹಾಯ ಯೋಜನೆಯಡಿಯಲ್ಲಿ ‘ಪುಸ್ತಕ ಪಂಚಮಿ’ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಜ.4ರಂದು ನಗರದ ಪಿಜೆ ಬಡಾವಣೆಯ ಈಶ್ವರಮ್ಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪ್ರಕಾಶ್ ಬೂಸ್ನೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ನಗರದ 12 ಶಾಲೆಗಳ 68 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದು, ಪ್ರತಿ ವಿದ್ಯಾರ್ಥಿಗೆ ಅಂದಾಜು ರೂ. 440 ಮುಖಬೆಲೆಯ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಶಬ್ಧಕೋಶ, ವ್ಯಾಕರಣ, ಪ್ರಬಂಧ, ಅಟ್ಲಾಸ್, ಜ್ಯಾಮಿಟ್ರಿ, ಕವಿ-ವಿಜ್ಞಾನಿಗಳ ಪರಿಚಯ, ಕ್ವಿಜ್, ಸಾಮಾನ್ಯ ಜ್ಞಾನ, ಇತಿಹಾಸ, ರಾಮಾಯಣ, ಮಹಾಭಾರತ ಹೀಗೆ ಇತರೆ ಉಪಯುಕ್ತ ಪುಸ್ತಕಗಳನ್ನು ನೀಡಲಾಗುವುದು ಎಂದರು. ಈ ಪುಸ್ತಕಗಳನ್ನು ಪ್ರತಿ ದಾನಿಯೂ ನೀಡುವ ರೂ.10,000 ದೇಣಿಗೆಯನ್ನು ಸಂಗ್ರಹಿಸಿ ಅದರಿಂದ ಬರುವ ಬಡ್ಡಿಯ ಹಣವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ನೀಡಲು ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಅಂದು ಮದ್ಯಾಹ್ನ 2.30ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ. ಆರ್. ತಿಪ್ಪೇಶಪ್ಪ ಉದ್ಘಾಟಿಸಲಿದ್ದು, ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ ಸುಜಾತಾ ಕೃಷ್ಣ ಕೆ.ಆರ್. ಅಧ್ಯಕ್ಷತೆ ವಹಿಸಲಿದ್ದು, ಪ್ರಾಂಶುಪಾಲರಾದ ಪ್ರಭುಕುಮಾರ್ ಕೆ.ಎಸ್. ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಸಹ ಸಂಚಾಲಕ ಡಾ. ಸಿ.ಆರ್. ಬಾಣಾಪುರ್ ಮಠ್ ಮಾತನಾಡಿ, ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಈ ಯೋಜನೆಯನ್ನು ತಲುಪಿಸುವ ಅಭಿಲಾಷೆ ಪ್ರತಿಷ್ಠಾನದ್ದಾಗಿದ್ದು, ದಾನಿಗಳ ಸಹಕಾರ ನೀಡಿದಲ್ಲಿ ಇದು ಸಾಧ್ಯವಾಗುತ್ತದೆ. ಹೀಗೆ ನೀಡುವ ದೇಣಿಗೆಗೆ 80ಜಿ ಪ್ರಕಾರ ಆದಾಯ ತೆರಿಗೆ ವಿನಾಯಿತಿಯೂ ಇರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿ.ಸಿ. ಪುರಾಣಿಕ್ ಮಠ್ ಇದ್ದರು.