ಸುದ್ದಿ360 ದಾವಣಗೆರೆ (ಹರಿಹರ) ಜ.14: ಟೀಕೆ ಮಾಡುವವರು ಮಾಡಲಿ ಅವುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಮಾಜಕ್ಕೆ ನ್ಯಾಯ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಪಂಚಮಸಾಲಿ ಜಗದ್ಗುರು ಪೀಠ, ಹರಿಹರ ಇವರ ವತಿಯಿಂದ ಆಯೋಜಿಸಿದ್ದ ಹರಜಾತ್ರಾ 2023 ಹಾಗೂ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದಲ್ಲಿ ಹೆಚ್ಚಿರುವ ರೈತಾಪಿ ವರ್ಗಕ್ಕೆ ಶಕ್ತಿಯನ್ನು ತುಂಬಬೇಕು. ಶಕ್ತಿ ತುಂಬಲು ಸಾಮಾಜಿಕ ನ್ಯಾಯ ನೀಡಬೇಕು. ನಾವು ಈ ವಿಷಯದಲ್ಲಿ ಟೀಕೆಟಿಪ್ಪಣಿಗಳಿಗೆ ಗಮನ ನೀಡದೆ ಸಾಮಾಜಿಕ ಬದ್ಧತೆಯಿಂದ ನಿಮ್ಮ ಪಾಲನ್ನು ನ್ಯಾಯಸಮ್ಮತವಾಗಿ ನೀಡುತ್ತೇವೆ. ಹಾಗೆಯೇ ಇತರರಿಗೆ ಕೂಡ ಎಲ್ಲಿಯೂ ಅನ್ಯಾಯವಾಗದಂತೆ ಮಾಡಬೇಕು. ನ್ಯಾಯಾಲಯದಲ್ಲಿ ವಾದವನ್ನು ಪ್ರಬಲವಾಗಿ ಮಂಡಿಸಿ ನಮ್ಮ ತೀರ್ಮಾನವನ್ನು ನ್ಯಾಯವಾಗಿ ಸಮರ್ಪಿಸಿ ಮುಂದಿನ ಹೆಜ್ಜೆಯನ್ನು ಇಡುತ್ತೇವೆ. ಅಂತಿಮ ವರದಿ ಬಂದ ಕೂಡಲೇ ಕ್ರಮ ತೆಗೆದುಕೊಂಡು ನಿಮ್ಮ ನಿರೀಕ್ಷೆ ಗೆ ನ್ಯಾಯ ನೀಡಲಾಗುವುದು. ನಿಮ್ಮ ವಿಶ್ವಾಸಕ್ಕೆ ಕೂದಲೆಳೆಯಷ್ಟೂ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು ಎಂದರು.
ಸರ್ಕಾರ ಮಾಡುವ ಕೆಲಸವನ್ನು ಮಠಗಳು ಮಾಡಿವೆ. ಅದಕ್ಕಾಗಿಯೇ ನಾವು ಸಹಾಯ ಮಾಡಿದ್ದೇವೆ. ಎಲ್ಲಾ ಮಠಗಳನ್ನು ಸರಿಸಮಾನವಾಗಿ ಕಂಡು ಅಭಿವೃದ್ಧಿ ಮಾಡುತ್ತಿದ್ದೇವೆ. ಯಾರು ಕೂಡ ಅನ್ಯಥಾ ಮಾತನಾಡಬಾರದು. ನಮ್ಮ ಸಮಾಜ ಅಭಿವೃದ್ಧಿಯಾದರೆ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಿತ್ತೂರು ಪ್ರಾಧಿಕಾರವನ್ನು ಸ್ಥಾಪಿಸಿ 50 ಕೋಟಿ ರೂ.ಗಳನ್ನು ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ , ವಾಲ್ಮೀಕಿ ಪೀಠ ಎಲ್ಲವನ್ನೂ ಸರಿ ಸಮಾನವಾಗಿ ಕಂಡಿದ್ದೇವೆ ಎಂದರು.
ಕಾನೂನಿನ ಚೌಕಟ್ಟಿನಲ್ಲಿ ನಿರ್ಣಯ
ಕೆಲವರಿಗೆ ರೈತರಿಗೆ ಸಹಾಯ ಮಾಡಿದರೆ ಲಾಭವಿಲ್ಲ ಎಂಬ ಮನೋಭಾವವಿದೆ. ಸಾಮಾಜಿಕ ನ್ಯಾಯ ನೀಡುವುದು ನಮ್ಮ ಇಚ್ಛೆ. ಸಂವಿಧಾನಬದ್ದ , ಕಾನೂನಿನ ಚೌಕಟ್ಟಿನಲ್ಲಿ ನಿರ್ಣಯ ಮಾಡಬೇಕು, ಶಾಶ್ವತ ನಿರ್ಣಯ ಗಳಾಗಬೇಕು. ಇದು ರಾಜಕಾರಣವಲ್ಲ. ಸಮಾಜಕ್ಕೆ ನೀಡುವ ಉತ್ತರದಾಯಿತ್ವ.
ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಾವುದೇ ಸರ್ಕಾರ ತಿರುಗಿ ನೋಡಿಲ್ಲ. ಸಾಮಾಜಿಕ ಸಮೀಕ್ಷೆ ಮಾಡಿರುವ ಕಾಂತರಾಜ್ ವರದಿ ಬಂದು 6 ವರ್ಷವಾದರೂ ಯಾರೂ ತಿರುಗಿ ನೋಡಿಲ್ಲ. ಜೈಪ್ರಕಾಶ್ ಹೆಗಡೆಯವರ ನೇತೃತ್ವದಲ್ಲಿ ನೇಮಕವಾಗಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿ ಸಲ್ಲಿಸಿದ ಒಂದು ವಾರದೊಳಗೆ ಸಂಪುಟದಲ್ಲಿ ನಿರ್ಣಯ ಮಾಡಲಾಗಿದೆ. ಇದು ನಮ್ಮ ಬದ್ಧತೆ. ಇನ್ನೊಬ್ಬರಿಗೆ ಅನ್ಯಾಯವಾಗದೆ ಶಾಶ್ವತವಾಗಿ ನ್ಯಾಯ ಸಿಗುವ ರೀತಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದೆ. ಗಡುವು ನೀಡಿದರೆ ಆಗುವುದಿಲ್ಲ. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಿ ಸಮಾಜಕ್ಕೆ ನ್ಯಾಯ ನೀಡಲು ಸಿದ್ದ ಎಂದರು.
ಪ್ರತಿಯೊಂದಕ್ಕೂ ತನ್ನದೇ ಆದ ಅಂತರ್ಗತ ಶಕ್ತಿಯಿರುತ್ತದೆ. ಅದೇ ರೀತಿ ವ್ಯಕ್ತಿ ಅಥವಾ ಸಮಾಜಕ್ಕೆ ತನ್ನದೇ ಶಕ್ತಿ ಇದೆ. ಆ ಶಕ್ತಿಯನ್ನು ಗುರುತಿಸಿ, ಗೌರವಿಸಬೇಕು.ಇದು ನಮ್ಮೆಲ್ಲರ ಕರ್ತವ್ಯ. ನ್ಯಾಯ ಸಿಗದಿರುವವರಿಗೆ ನ್ಯಾಯ ದೊರಕಬೇಕು. ಹೆಚ್ಚುಗಾರಿಕೆ, ನಮ್ಮನಮ್ಮಲ್ಲೇ ಬೇಧ ಭಾವ ತರುವುದರಿಂದ ನಮ್ಮ ವೈಯಕ್ತಿಕ ಪ್ರತಿಷ್ಠೆ ಹೆಚ್ಚು ಕಡಿಮೆಯಾಗಬಹುದು ಆದರೆ ಲಾಭವಾಗುವುದಿಲ್ಲ. ಸಮಾಜಕ್ಕೆ ಒಳಿತಾಗಬೇಕೆಂದರೆ ನಾವು ಒಟ್ಟಾಗಿ ಒಗ್ಗಟ್ಟಿನಿಂದ ತಲ ತಲಾಂತರದಿಂದ ಬಂದ ರೈತಾಪಿ ವರ್ಗದ ವೃತ್ತಿ ಹಾಗೂ ಶಿಕ್ಷಣ ನೀಡಬೇಕು. ಈ ಎರಡು ಜವಾಬ್ದಾರಿ ನಮ್ಮ ಮೇಲಿದೆ. ನ್ಯಾಯ ನೀಡುವ ಕೆಲಸ ಬಹಳ ಮುಖ್ಯ. ಈ ಕೆಲಸ ವನ್ನು ನಾವು ಮಾಡಿಯೇ ತೀರುತ್ತೇವೆ ಎಂದರು.
ರೈತಾಪಿ ವರ್ಗದ ಕುಟುಂಬದ ಸ್ಥಿತಿ ಉತ್ತಮವಾಗಿಲ್ಲ. ರೈತ ವಿದ್ಯಾನಿಧಿ ಕಾರ್ಯಕ್ರಮ ರೂಪುಗೊಂಡಿರುವುದು ರೈತನ ಮಕ್ಕಳ ಶಿಕ್ಷಣಕ್ಕಾಗಿ. ರೈತರ ಮಕ್ಕಳಿಗೆ ಇದರ ಅಗತ್ಯ ಮನಗಂಡು ಮುಖ್ಯ ಮಂತ್ರಿಯಾದ ನಾಲ್ಕು ತಾಸಿನಲ್ಲಿ ಯೋಜನೆ ಘೋಷಣೆ ಮಾಡಲಾಗಿದೆ. 11 ಲಕ್ಷಕ್ಕಿಂತ ಹೆಚ್ಚು ರೈತರ ಮಕ್ಕಳಿಗೆ ಈ ಯೋಜನೆ ತಲುಪುತ್ತಿದೆ. ಹೆಣ್ಣುಮಕ್ಕಳಿಗೆ 8 ನೇ ತರಗತಿಗೆ ಹಾಗೂ ಗಂಡುಮಕ್ಕಳಿಗೆ 10 ನೇ ತರಗತಿಗೆ ವಿದ್ಯಾರ್ಥಿ ವೇತನ ದೊರೆಯುತ್ತಿದೆ. ಪ್ರಧಾನಮಂತ್ರಿ ಗಳ ರೈತ ಸಮ್ಮಾನ್ ಯೋಜನೆ, ರೈತ ಶಕ್ತಿ ಯೋಜನೆ, 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಸಾಲ ನೀಡಲಾಗಿದೆ. 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದೆ. ಕೃಷಿಗೆ ಎಲ್ಲಾ ಬೆಂಬಲ ನೀಡಿದೆ. ಕೇಂದ್ರ ಸರ್ಕಾರದ ಪರಿಹಾರದ ದುಪ್ಪಟ್ಟು ಮೊತ್ತವನ್ನು ಪ್ರಥಮ ಬಾರಿಗೆ ನೀಡಲಾಗಿದೆ. ನಮ್ಮ ಸರ್ಕಾರ ರೈತ ಪರವಾದ ನಿಲುವು ಹೊಂದಿದೆ. 10 ಹೆಚ್.ಪಿ ಉಚಿತ ವಿದ್ಯುತ್, ಹಾಲು ಉತ್ಪಾದನೆಗೆ ಪ್ರೋತ್ಸಾಹ ಧನ ವನ್ನು ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಲಗೂರು ವೀರಶೈವ ಲಿಂಗಾಯತ ಪಂಚಮಶಾಲಿ ಪೀಠದ ಶ್ರೀ ಮಹದೇವ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ, ಕನಕ ಗುರುಪೀಠ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಮನಗುಳಿ ಹಿರೇಮಠದ ಶ್ರೀ ಷ.ಬ್ರ. ಸಂಗನ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಮಾವೇಶದ ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಕರುಣಾಕರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಶೇಖರ್ ಪೂಜಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ವಸಂತ ಬಿ. ಹುಲ್ಗತ್ತಿ ಸ್ವಾಗತಿಸಿದರು, ಹಾರಕಬಾವಿ ಬಸವರಾಜ್ ನಿರೂಪಿಸಿದರು. ಸಮಾವೇಶದಲ್ಲಿ ಯುವಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.