ಸುದ್ದಿ360 ದಾವಣಗೆರೆ ಮಾ.6: ಜಿಲ್ಲೆಯ ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ದಲಿತರು ಸಾಗುವಳಿ ಮಾಡಿರುವ ಸರ್ಕಾರಿ ಭೂಮಿಯನ್ನು ಉದ್ದೇಶಪೂರ್ವಕವಾಗಿ ಸ್ಮಶಾನಕ್ಕೆ ಸೇರಿಸಲು ಹೊರಟಿರುವ ಕುತಂತ್ರವನ್ನು ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಾಲಕಟ್ಟೆ ಗ್ರಾಮದಲ್ಲಿ 15 ಎಕರೆ 30 ಸೆಂಟ್ಸ್ ಗೋಮಾಳ ಜಮೀನು ಇದ್ದು ಇದರಲ್ಲಿ 6 ಎಕರೆ ಜಮೀನನ್ನು 1 ಎಕರೆ 30 ಸೆಂಟ್ಸ್ ನಂತೆ 5 ಜನ ದಲಿತರು ಉಳುಮೆ ಮಾಡುತ್ತಿದ್ದಾರೆ. ಇವರಿಗೆ ಈ ಜಮೀನು ಬಿಟ್ಟರೆ ಉಳುಮೆ ಮಾಡಲು ಬೇರೆ ಜಮೀನು ಇಲ್ಲ. ಇಂತಹವರ ಜಮೀನನ್ನೇ ಸೇರಿಸಿ 8 ಎಕರೆ ಭೂಮಿಯನ್ನು ಕೇವಲ 500 ಮನೆ ಇರುವ ಗ್ರಾಮಕ್ಕೆ ಸ್ಮಶಾನವನ್ನಾಗಿ ಮಾರ್ಪಡಿಸಿದ್ದಾರೆ. ಉಳಿದ ಭೂಮಿಯನ್ನು 3ರಿಂದ 5 ಎಕರೆ ಜಮೀನು ಹೊಂದಿರುವ ಮೇ್ಲರ್ಗದವರು ಹೆಚ್ಚುವರಿಯಾಗಿ ಸರ್ಕಾರಿ ಭೂಮಿಯನ್ನು ಪಡೆದಿದ್ದಾರೆ. ದಲಿತರು ಭೂಮಿಯ ಒಡೆತನವನ್ನು ಹೊಂದಬಾರದು ಎಂಬ ದುರುದ್ದೇಶದಿಂದಲೇ ಈ ರೀತಿಯಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಮೇಲ್ವರ್ಗದವರ ಈ ಕುತಂತ್ರವನ್ನು ಮನಗಂಡು ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು. ಸ್ಮಶಾನಕ್ಕೆ 2 ಎಕರೆ ಭೂಮಿಯನ್ನು ತೆಗೆದಿರಿಸಿ ಉಳಿದ ಭೂಮಿಯನ್ನು ಯಥಾ ಸ್ಥಿತಿಯಂತೆ ದಲಿತರಿಗೆ ಹಕ್ಕು ಪತ್ರ ನೀಡಿ ಖಾತೆ ರಿಜಿಸ್ಟರ್ ಮಾಡಿಸಿ ಕೊಡಬೇಕೆಂದು ಬಹುಜನ ಸಮಾಜ ಪಾರ್ಟಿ ಮುಖಂತರ ಮಾ.10ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್ ಇದ್ದರು.