ಸುದ್ದಿ360 ದಾವಣಗೆರೆ, ಜು.29: ದಾವಣಗೆರೆಯಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ಮಾಡಲು ಭಗೀರಥ ಪ್ರಯತ್ನ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಗನೂರು ಬಸಪ್ಪ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ, ನನ್ನ 5 ವರ್ಷದ ಅವಧಿಯೊಳಗೆ ಸ್ಥಳ ಬದಲಾವಣೆ ಇಲ್ಲದೆ, ಇಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಶಕ್ತಿ ಎಲ್ಲವನ್ನೂ ಸರ್ಕಾರದ ಜೊತೆಗೆ ಹಾಕಿ ಸಮ್ಮೇಳನ ನಡೆಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದನಾ ನುಡಿಗಳನ್ನಾಡಿದ ಮಾಜಿ ಸಚಿವ ಎಸ್.ಎಸ್. ಪಾಟೀಲ್, ಶರಣ ಮಾಗನೂರು ಬಸಪ್ಪನವರು, ಶರಣತತ್ವದಲ್ಲಿ ನಂಬಿಕೆ ಇಟ್ಟು ರಾಜಕೀಯ, ಸಾಮಾಜಿಕ ಸಾಹಿತ್ಯ, ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದವರು. ಇನ್ನು ಇಂದಿನ ಪ್ರಶಸ್ತಿಗೆ ಭಾಜನರಾದ ತೋಂಟದ ಸಿದ್ಧರಾಮ ಶ್ರೀಗಳು, ದಾಸೋಹ, ಶರಣ ತತ್ವದಡಿ ಬದುಕುತ್ತಿರುವವರು. ಸಾಕಷ್ಟು ಪರಿಸರ ಕಾಳಜಿ ಹೊಂದಿರುವ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಗಳಿಗೆ ಬಸಪ್ಪನವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು, ಆ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದಂತಾಗಿದೆ ಎಂದು ಹೇಳಿದರು.
ಕಾಯಕ ಎನ್ನುವುದು ಭಗವಂತನಿಗಿಂತ ಶ್ರೇಷ್ಟ
ಸಮಾರಂಭದ ಸಾನ್ನಿಧ್ಯ ವಹಿಸಿ, ಪ್ರಶಸ್ತಿ ಸ್ವೀಕರಿಸಿದ ಗದಗ ತೋಂಟದಾರ್ಯ ಮಠದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ದರಾಮ ಶ್ರೀಗಳು ಮಾತನಾಡಿ, ಶರಣರ ದೃಷ್ಟಿಯಲ್ಲಿ ಕಾಯಕ ಎನ್ನುವುದು ಭಗವಂತನಿಗಿಂತ ಶ್ರೇಷ್ಟ. ಅದು ಭಗವಂತನ ನಿಷ್ಠೆಯಂತೆ. ಭಗವಂತನ ನಾಮಸ್ಮರಣೆ ಜೊತೆಗೆ ಕಾಯಕ ಮಾಡುವವರೇ ಭಕ್ತರು. ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕಿದೆ ಎಂದರೆ ನಿಷ್ಕಲ್ಮಶ ಭಾವದಿಂದ ಸತ್ಯ ಶುದ್ಧ ಕಾಯಕ ಮಾಡಬೇಕು.ಆಗ ಮಾತ್ರ ಪರಮಾತ್ಮನ ಸಾನ್ನಿಧ್ಯ ಲಭಿಸಲಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಸವರಾಜ ಡಿ.ಕುಂಬಾರ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಸುನಂದಾದೇವಿ ಉಪಸ್ಥಿತರಿದ್ದರು. ಬಿ.ದಿಳ್ಳಪ್ಪ, ಅನಿತಾ ದೊಡಗೌಡ ಇತರರು ಉಪಸ್ಥಿತರಿದ್ದರು.