ದಾವಣಗೆರೆಯಲ್ಲಿ ಸಂಚಾರಿ ನಿಯಮ ಅರಿವು ಮೂಡಿಸುವ ಚಂದದ ಕಲಿಕೆಯ ‘ಟ್ರಾಫಿಕ್ ಅವೇರ್ನೆಸ್ ಪಾರ್ಕ್’ – ನೀವೂ ಒಮ್ಮೆ ಭೇಟಿ ನೀಡಿ…

ಸುದ್ದಿ360 ದಾವಣಗೆರೆ ಜ.11: ರಸ್ತೆ ಮೇಲಿನ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಸ್ತೆಬದಿಯಲ್ಲಿನ ಸಂಚಾರಿ ನಿಯಮಗಳ ಸೂಚನಾ ಫಲಕಗಳ ಬಗ್ಗೆ ವಿದ್ಯಾರ್ಥಿದಿಸೆಯಿಂದಲೇ ಅರಿವು ಮೂಡಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯಪಟ್ಟರು.

ನಗರದ ನಿಜಲಿಂಗಪ್ಪ ಬಡಾವಣೆಯ  ಶ್ರೀಮತಿ ಗಂಗೂಬಾಯಿ ಹಾನಗಲ್ಲ ಉದ್ಯಾನವನ (ಗಸೆಗಸೆ ಪಾರ್ಕ್)  ದಲ್ಲಿ ನಿರ್ಮಿಸಲಾಗಿದ್ದ ‘‘ಸಂಚಾರ ಜಾಗೃತಿ ಉದ್ಯಾನವನ’ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ 24ಕ್ಕೂ ಹೆಚ್ಚು ಸೂಚನಾ ಫಲಕಗಳು ಮತ್ತು ಟ್ರಾಫಿಕ್ ಲೈಟ್ ಪೋಲ್, ಹಾಗೂ ಸಂಚಾರಿ ನಿಯಮಗಳ ಚಿಹ್ನೆಗಳನ್ನೊಳಗೊಂಡ ಬೋರ್ಡ್ ನ್ನು ಪಾರ್ಕ್ ನಲ್ಲಿ ಅಳವಡಿಸಲಾಗಿದ್ದು, ಶಾಲಾ ಮಕ್ಕಳನ್ನು ಇಲ್ಲಿಗೆ ಕರೆತಂದು ಸಂಚಾರ ನಿಯಮದ ಮಾಹಿತಿ ನೀಡುವ ಮತ್ತು ಅವುಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಉದ್ಯಾನವನ್ನು ರೂಪಿಸಲಾಗಿದ್ದು ಪ್ರತಿ ಶಾಲೆಯವರು ಇದರ ಸದುಪಯೋಗವನ್ನು ಮಕ್ಕಳಿಗೆ ಒದಗಿಸಬೇಕು ಎಂದರು.

ಇಲಾಖೆಯಿಂದ ಶಾಲೆಗಳಿಗೆ ಹೋಗಿ ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಾದೆಯಾದರೂ ಅದು ವಿದ್ಯಾರ್ಥಿಗಳಿಗೆ ಅಷ್ಟೊಂದು ಆಸಕ್ತಿದಾಯಕವಾಗಿರದೇ ಇರಬಹುದು ಎಂಬ ದೃಷ್ಠಿಯಿಂದ ಪಾರ್ಕ್ನಲ್ಲಿ ಸಂಚಾರಿ ನಿಯಮದ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಮಕ್ಕಳು ಮತ್ತು ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ ಎಂದರು.

ಬೇರೆ ದೇಶಕ್ಕೆ ಹೋದಾಗ ಅಲ್ಲಿನ ಎಲ್ಲ ಸಂಚಾರ ನಿಯಮಗಳನ್ನು ಪಾಲಿಸುವ ಜನರು ನಮ್ಮಲ್ಲಿನ ನಿಯಮಗಳನ್ನು ಪಾಲಿಸದೆ ರಸ್ತೆ ಅವಘಡಗಳಿಗೆ ಕಾರಣವಾಗುತ್ತಾರೆ. ಹೆಲ್ಮೆಟ್‍ ಧರಿಸದೇ ಇರುವುದು, ಎಲ್ಲೆಂದರಲ್ಲಿ ಉಗುಳುವುದು, ರಾಂಗ್ ಸೈಡ್ ನಲ್ಲಿ ವಾಹನ ಚಲಿಸುವುದು, ಮತ್ತೆ ಕೆಲವರು ಟ್ರಾಫಿಕ್ ರೂಲ್ಸ್ಗಳನ್ನು ಬ್ರೇಕ್ ಮಾಡುವುದೇ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಬೇಸರ ವ್ಯಕ್ತಪಡಿಸಿದರು.

ಯಾವುದೇ  ಶಾಲೆ ತಮ್ಮ ವಿದ್ಯಾರ್ಥಿಗಳನ್ನು ‘‘ಸಂಚಾರ ಜಾಗೃತಿ ಉದ್ಯಾನವನ’ ಗೆ ಕರೆತಂದು ಸಂಚಾರಿ ನಿಯಮಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು. ಮತ್ತು ಶಾಲೆಯವರು ಮುಂಚಿತವಾಗಿ ಆರ್‍ ಟಿ ಒ ಕಛೇರಿಗೆ ತಿಳಿಸಿದಲ್ಲಿ ಪಾರ್ಕ್ ಆವರಣದಲ್ಲಿ ನಿರ್ಮಿಸಿರುವ ಸೂಚನಾ ಫಲಕಗಳ ಮತ್ತು ಸಂಚಾರಿ ನಿಯಮಗಳ ಮಾಹಿತಿ ನೀಡಲು ಇಲಾಖೆಯವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ನಗರದ ಎಜು ಏಷ್ಯಾ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಮಾಹಿತಿ ಪಡೆದರು.

ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಗಿ, ಆರ್ ಟಿ ಓ ರವರಾದ ಶ್ರೀಧರ, ಸ್ಮಾರ್ಟ್ ಸಿಟಿ ಯೋಜನಾ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಬಿಇಒ ದಾರುಕೇಶ್, ಡಿವೈಎಸ್ಪಿ ರವರಾದ ಬಸವರಾಜ್ ಬಿ.ಎಸ್ (ಡಿಸಿ ಆರ್ ಬಿ), ಮಲ್ಲೇಶ್ ದೊಡ್ಮನಿ (ನಗರ ಉಪ ವಿಭಾಗ), ಪಿ ಬಿ ಪ್ರಕಾಶ್ (ಡಿ ಎ ಅರ್), ಪೊಲೀಸ್ ನಿರೀಕ್ಷಕರಾದ ಗಜೇಂದ್ರಪ್ಪ, ಗುರುಬಸವರಾಜ, ಶಶಿಧರ, ಮಲ್ಲಮ್ಮ ಚೌಬ್ಬೆ, ಧನಂಜಯ್,  ಸಂಚಾರ ವೃತ್ತ ನಿರೀಕ್ಷಕರಾದ ಅನಿಲ್, ಪಿ ಎಸ್ ಐ ವೀರಬಸಪ್ಪ ಕುಸಲಾಪುರ, ನಿರ್ಮಲಾ, ಜಯಪ್ರಕಾಶ್ ಸೇರಿದಂತೆ ಸಂಚಾರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!