81ಸ್ವರ್ಣಪದಕಗಳನ್ನು ಹಂಚಿಕೊಂಡ 45 ವಿದ್ಯಾರ್ಥಿಗಳು – 3 ಗೌರವ ಡಾಕ್ಟರೇಟ್
ಸುದ್ದಿ360 ದಾವಣಗೆರೆ ಫೆ.28: ದಾವಣಗೆರೆ ವಿಶ್ವ ವಿದ್ಯಾಲಯ ಶಿವಗಂಗೋತ್ರಿಯ ಜ್ಞಾನಸೌಧದಲ್ಲಿ ಇಂದು ಹತ್ತನೇ ಘಟಿಕೋತ್ಸವ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 81 ವಿದ್ಯಾರ್ಥಿಗಳು ಸ್ವರ್ಣ ಪದಕದೊಂದಿಗೆ ತೇರ್ಗಡೆ ಹೊಂದಿದರು.
ಇದೇ ವೇಳೆ ಟಿ.ಎಂ. ಚಂದ್ರಶೇಖರಯ್ಯ, ಅಥಣಿ ಎಸ್ ವೀರಣ್ಣ ಹಾಗೂ ಮರಣೋತ್ತರವಾಗಿ ಎಂ.ಎಸ್. ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಒಟ್ಟು 81 ಸ್ವರ್ಣ ಪದಕಗಳಲ್ಲಿ ಸ್ನಾತಕ ಪದವಿಯಲ್ಲಿ 10 ಮಹಿಳಾ ಹಾಗೂ 04 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನ ಪಡೆದರು ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ಮಹಿಳಾ ಹಾಗೂ 09 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಸ್ವೀಕರಿಸಿದರು. ಇನ್ನು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿನಿಯರು ಹಾಗೂ 13 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಸ್ವರ್ಣ ಪದಕಗಳನ್ನು ಹಂಚಿಕೊಂಡರು. 10 ಪುರುಷ ವಿದ್ಯಾರ್ಥಿಗಳು ಹಾಗೂ 04 ಜನ ಮಹಿಳಾ ವಿದ್ಯಾರ್ಥಿನಿಯರು ಪಿಹೆಚ್ಡಿ ಪಡೆದಿದ್ದು, ಒಬ್ಬರು ಎಂಫಿಲ್ ಪದವಿಯನ್ನು ಪಡೆದರು.
12,179 ಸ್ನಾತಕ ಪದವಿಗಳಲ್ಲಿ 7,219 ವಿದ್ಯಾರ್ಥಿನಿಯರು ಹಾಗೂ 4,960 ವಿದ್ಯಾರ್ಥಿಗಳು ಪದವಿ ಪಡೆದರು. ಒಟ್ಟು 1,799 ಸ್ನಾತಕೋತ್ತರ ಪದವಿಗಳಲ್ಲಿ 1,161 ಮಹಿಳಾ ವಿದ್ಯಾರ್ಥಿಗಳು ಹಾಗೂ 638 ಪುರುಷ ವಿದ್ಯಾರ್ಥಿಗಳು ಪದವಿಗಳನ್ನು ಪಡೆದಿದ್ದಾರೆ.
ಎಂ ಎಸ್ಸಿ ಬಯೋಖೆಮಿಸ್ಟ್ರಿ ಯಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಐದು ಸ್ವರ್ಣ ಪದಕಗಳಿಗೆ ಕೊರಳೊಡ್ಡಿರುವ ಕೆ. ಅರುಣ್ ಶರ್ಮಾ, ತನಗೆ ಲಭಿಸಿರುವ ಈ ಪದಕಗಳ ಯಶಸ್ಸು ತನ್ನ ತಂದೆ ತಾಯಿ, ಪಾಠ ಕಲಿಸಿದ ಗುರುಗಳು ಹಾಗೂ ರಾಷ್ಟ್ರಕ್ಕೆ ಸಲ್ಲಬೇಕು ಎಂದು ಹೇಳಿದರು.
ತರಗತಿಯಲ್ಲಿ ಏಕಾಗ್ರತೆಯಿಂದ ಕೇಳಿದ ಪಾಠ ಮತ್ತು ಓದುವಿಕೆಗಾಗಿ ತಾನು ರೂಢಿಸಿಕೊಂಡ ಕ್ರಮ, ಪ್ರಾಧ್ಯಾಪಕರು ನೀಡಿದ ಸಲಹೆ ಸೂಚನೆಗಳಿಂದ ನನಗೆ ಈ ಹಂತವನ್ನು ತಲುಪಲು ಸಾಧ್ಯವಾಯಿತು. ನಾನು ಮೂರು ಪದಕಗಳನ್ನು ನಿರೀಕ್ಷಿಸಿದ್ದೆ ಐದು ಪದಕಗಳು ಬಂದಿರುವುದು ಸಹಜವಾಗಿ ಖುಷಿ ತಂದಿದೆ ಎಂದರು.