ಮಾರ್ಚ್ 26ರೊಳಗೆ ಬೇಡಿಕೆ ಈಡೇರುವ ಆಶ್ವಾಸನೆ
ಸುದ್ದಿ360 ದಾವಣಗೆರೆ, ಮಾ.18: ಹಲವು ಬೇಡಿಕೆಗಳ ಈಡೇರಿಸುವಂತೆ ಸತತ ನಾಲ್ಕು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಪ್ರತಿಭಟನಾ ಧರಣಿಯಲ್ಲಿ ನಿರತರಾಗಿದ್ದ ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಇಂದು ಸೇವೆಗೆ ಹಾಜರಾಗಿದ್ದಾರೆ.
ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಮತ್ತು ಅಧೀಕ್ಷಕರು ನಮ್ಮ ಬೇಡಿಕೆಗೆ ಸ್ಪಂದಿಸಿ, ತಮ್ಮ ಬೇಡಿಕೆಗಳನ್ನು ಇದೇ ಮಾರ್ಚ್ 26 ರೊಳಗಾಗಿ ಈಡೇರಿಸುವ ಆಶ್ವಾಸನೆ ನೀಡಿದ್ದರಿಂದ ನೌಕರರು ಸೇವೆಗೆ ಹಿಂದಿರುಗಲು ಒಪ್ಪಿದ್ದು, ಕೈಗೆ ಕಪ್ಪುಪಟ್ಟಿ ಧರಿಸಿ ಧರಣಿಯನ್ನು ಜೀವಂತವಾಗಿಡಲಾಗಿದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ. ಹನುಮಂತಪ್ಪ ತಿಳಿಸಿದ್ದಾರೆ.
ಈ ಮೂಲಕ ನಾನ್ ಕ್ಲಿನಿಕಲ್ ಮತ್ತು ಡಿ ಗ್ರೂಪ್ ದಿನಗೂಲಿ ನೌಕರರಾದ 195 ಹೊರಗುತ್ತಿಗೆ ಹಾಗೂ 45 ರಿಲೀವರ್ಸ್ ಸೇರಿದಂತೆ ಒಟ್ಟು 240 ಮಂದಿ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಇಂದಿನಿಂದ (ಮಾ.18ರಿಂದ) ಸೇವೆಗೆ ಹಾಜರಾಗಲು ಒಪ್ಪಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೆ. ತಿಳಿಸಿದ್ದಾರೆ.