ದಾವಣಗೆರೆ: ಲಂಚ ಸ್ವೀಕರಿಸುತ್ತಿರುವ ವೀಡಿಯೋ ಅಧರಿಸಿ, ಮಹಾನಗರ ಪಾಲಿಕೆ ವಲಯ ಕಚೇರಿ 3ರ ಕಂದಾಯಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ ವಸೂಲಿಕಾರನನ್ನು ಅಮಾನತುಗೊಳಿಸಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಎನ್. ಶಿವಣ್ಣ ಅಮಾನತುಗೊಂಡ ಕರ ವಸೂಲಿಕಾರನಾಗಿದ್ದು, ಆಸ್ತಿ ಒಂದರ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪದಲ್ಲಿ ಅಮಾನತು ಮಾಡಲಾಗಿದೆ.
ಶಿವಣ್ಣ ಖಾತೆ ವರ್ಗಾವಣೆ ಮಾಡಲು ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ಕುರಿತ ವಿಡಿಯೋವನ್ನು ಸಾರ್ವಜನಿಕರೊಬ್ಬರು ಆಯುಕ್ತರ ಮೋಬೈಲ್‌ಗೆ ವಾಟ್ಸ್ಆ್ಯಪ್ ಮಾಡಿ, ವಿಡಿಯೋ ಆಧಾರದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ವೀಡಿಯೋ ಕುರಿತಾಗಿ ಕಾರಣ ಕೇಳಿ ಕರ ವಸೂಲಿಗಾರ ಶಿವಣ್ಣಗೆ ನೋಟೀಸ್ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಣ್ಣ, ಅಂತೋಣಿರಾಜ್ ಎಂಬುವರು ಖಾತಾ ಬದಲಾವಣಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಯುವರಾಜ್ ಎಂಬ ವ್ಯಕ್ತಿ ಬಂದು ‘ನಾನು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದೇನೆ. ನಾನು ಬರುವುದು ಎರಡು ದಿನ ಆಗುತ್ತದೆ ನೀನೇ ಖಾತೆ ಬದಲಾವಣೆ ಹಣ ತುಂಬು’ ಎಂದು ಹೇಳಿ ಖಾತೆ ವರ್ಗಾವಣೆ ಶುಲ್ಕ 5600 ರೂ. ಕೊಟ್ಟಿದ್ದರು. ಅದೇ ವಿಡಿಯೋ ಮಾಡಿ ಆಯುಕ್ತರಿಗೆ ಕಳುಹಿಸಲಾಗಿದೆ ಎಂಬುದಾಗಿ ಸಮಜಾಯಿಷಿ ನೀಡಿದ್ದಾರೆ.
ಆದರೆ, ವಿಡಿಯೋದಲ್ಲಿನ ದೃಷ್ಯದಲ್ಲಿ ನೌಕರ 500 ರೂ. ನೋಟುಗಳನ್ನು ಏಣಿಸುತ್ತಿರುವುದು, ಬಳಿಕ ಆ ನೋಟುಗಳನ್ನು ತನ್ನ ಜೇಬಿನಲ್ಲಿ ಇರಿಸಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಲಂಚ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಿಯಮದಂತೆ ಆನ್‌ಲೈನ್ ತಂತ್ರಾಂಶದ ಮೂಲಕ ಸೃಷ್ಟಿಸಿರುವ ಚಲನ್ ಪಡೆದು, ಬ್ಯಾಂಕ್ ಮೂಲಕ ಖಾತಾ ವರ್ಗಾವಣೆ ಶುಲ್ಕ ಪಡೆಯಬೇಕು. ಆದರೆ ನೀವು ಸಾರ್ವಜನಿಕರಿಂದ ನೇರವಾಗಿ ಹಣ ಪಡೆದು ಖಾತಾ ವರ್ಗಾವಣೆ ಶುಲ್ಕ ಪಾವತಿಸುತ್ತೇನೆಂದು ಹೇಳುತ್ತಿದ್ದೀರಿ ಇದನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಹಾಗೂ ಕರ ವಸೂಲಿಕಾರ ಶಿವಣ್ಣ ವಿರುದ್ಧದ ವಿಚಾರಣೆ ಬಾಕಿ ಇರಿಸಿ, ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತು ಅವಧಿಯಲ್ಲಿ ಪೂರ್ವಾನುಮತಿ ಪಡೆಯದೆ ನೌಕರ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.