ಸುದ್ದಿ360 ದಾವಣಗೆರೆ, ಜು.29: ಶ್ರವಣ ಎಂದರೆ ಕೇಳುವುದು . ಒಳ್ಳೆಯ ವಿಚಾರಗಳು ಕೇಳಿಸಿಕೊಳ್ಳಬೇಕು. ಮನದ ಮೈಲಿಗೆಯನ್ನು ತೊಳೆಯಲು ಸುಜ್ಞಾನ ಬೇಕು. ಮಹಾತ್ಮರ , ಶರಣರ ನುಡಿಗಳೇ ಸುಜ್ಞಾನ . ಸುಜ್ಞಾನದಿಂದ ಬದುಕು ಶ್ರೇಷ್ಠವಾಗುತ್ತದೆ ಎಂದು ಬಸವಪ್ರಭುಶ್ರೀಗಳು ನುಡಿದರು.
ಬಸವಪ್ರಭು ಸ್ವಾಮೀಜಿ , ಕುಮಾರಶಾಸ್ತ್ರೀ ಹಿರೇಮಠ , ಯಶವಂತರಾವ್ ಜಾದವ್ , ಲೋಕಿಕೆರೆ ನಾಗರಾಜ್ ದಿವ್ಯಪಥ ಲೋಕಹಿತ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು.
ಅಥಣಿ ಶಿವಯೋಗಿಗಳ ಜೀವನ ದರ್ಶನ ಕುರಿತಾದ ಡಾ. ಮುರುಘಾ ಶರಣರು ರಚಿಸಿರುವ ‘ದಿವ್ಯಪಥ ಲೋಕಹಿತ’ 112 ನೇ ವರ್ಷದ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಪ್ರವಚನ ನೀಡುತ್ತಾ, ಶ್ರಾವಣ ಮಾಸದಲ್ಲಿ ಶ್ರವಣ ಮಾಡುವ ಪದ್ಧತಿಯನ್ನು ಪ್ರಾರಂಭಿಸಿದ ಮೊದಲ ಮಠ ದಾವಣಗೆರೆ ವಿರಕ್ತಮಠವಾಗಿದೆ. 1911 ರಲ್ಲಿ ಜಯದೇವ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಅಂದಿನ ವಿರಕ್ತಮಠಾಧೀಶರಾದ ಮೃತ್ಯುಂಜಯ ಅಪ್ಪಗಳು , ಹರ್ಡೇಕರ ಮಂಜಪ್ಪನವರು ಶ್ರಾವಣ ಮಾಸದಲ್ಲಿ ಪ್ರವಚನವನ್ನು ಪ್ರಾರಂಬಿಸಿದರು .ಅಂದಿನಿಂದ ಇಲ್ಲಿಯವರೆಗೆ 112 ವರ್ಷಗಳು ತುಂಬಿವೆ ಇಂತಹ ಶ್ರೇಷ್ಠ ಪರಂಪರೆಯ ಐತಿಹಾಸಿಕತೆ ಶ್ರೀಮಠಕ್ಕೆ ಇದೆ ಎಂದು ಹೇಳಿದರು.
ಈ ವರ್ಷ ಮುರುಘಾ ಶರಣರು ರಚಿಸಿರುವ ಅಥಣಿ ಶಿವಯೋಗಿಗಳ ಕುರಿತು ದಿವ್ಯಪಥ ಲೋಕಹಿತ ಕೃತಿಯ ಪ್ರವಚನ ಒಂದು ತಿಂಗಳು ಕಾಲ ನಡೆಯುತ್ತದೆ. ಅಥಣಿ ಶಿವಯೋಗಿಗಳು ನಾಡಿನ ದೊಡ್ಡ ಮಹಾತ್ಮರು. ಅವರ ಜೀವನ ದಿವ್ಯಪಥ ಅಂದರೆ ಆಧ್ಯಾತ್ಮ ಪಥ , ಧಾರ್ಮಿಕ ಪಥ , ಯೋಗಪಥ , ಧ್ಯಾನಪಥ. ಧ್ಯಾನದಿಂದ ದಿವ್ಯತೆ ಭವ್ಯತೆ ಪಡೆದು ಶಿವಯೋಗಿಗಳಾಗಿದ್ದಾರೆ. ಬಸವತತ್ವವನ್ನು ಭೋದಿಸದೆ ಬದುಕಿನಲ್ಲಿ ಅನುಷ್ಠಾನ ಮಾಡಿ ತೋರಿಸಿದ ಮಹಾತ್ಮರಾಗಿದ್ದಾರೆ. ಶಿವಯೋಗಿಗಳು ಲಿಂಗೈಕ್ಯರಾಗಿ ಇಂದಿಗೆ ನೂರು ವರ್ಷಗಳು ಪೂರ್ಣಗೊಂಡಿವೆ ಆ ಹಿನ್ನಲೆಯಲ್ಲಿ ವಿರಕ್ತಮಠದಲ್ಲಿ ಶಿವಯೋಗಿಗಳ ಸ್ಮರಣೆಯ ಕಾರ್ಯವನ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.