ಸಿದ್ಧರಾಮಯ್ಯ ಮೇಲೆ ಅಭಿಮಾನ ಜಾಸ್ತಿ : ಎಸ್‌ಎಸ್ ಎಂ
ಸುದ್ದಿ360 ದಾವಣಗೆರೆ ಆ.06: ಯಾವುದೇ ಹಗರಣ, ಕಪ್ಪುಚುಕ್ಕೆ ಇಲ್ಲದೆ, ನುಡಿದಂತೆ ನಡೆದ, ಸ್ವಚ್ಛ ಹಾಗೂ ಜನಪರ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಹಜವಾಗಿ ಅಭಿಮಾನಿಗಳು ಜಾಸ್ತಿ ಇರುವುದು ಒಂದೆಡೆಯಾದರೆ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾದ ದುರಾಡಳಿತದಿಂದ ಬೇಸತ್ತ ಜನರು ಕಿತ್ತೆದ್ದು ಬಂದು ಸಮಾವೇಶದಲ್ಲಿ ಪಾಲ್ಗೊಂಡರು ಎಂದು ಸಮಾವೇಶದ ಸಂಘಟಕರಲ್ಲಿ ಓರ್ವರಾದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ತಮ್ಮ ಅಂದಾಜು 10ರಿಂದ 12 ಲಕ್ಷ ಜನರು ಸೇರಿರಬಹದು ಎಂದು ಹೇಳಿದ ಅವರು, ಇಷ್ಟೊಂದು ದೊಡ್ಡ ಪ್ರಮಾಣದ ಸಮಾವೇಶ ಕಣ್ತುಂಬಿಕೊಂಡ ಭಾಗ್ಯ ನಮ್ಮದು. ಮುಂದಿನ ಚುನಾವಣೆಯಲ್ಲಿ ಹರಿಹರದಿಂದ ಸ್ಪರ್ಧಿಸುವಂತೆ ಮತ್ತೊಮ್ಮೆ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ವಿಭಾಗ ಸೇರಿದಂತೆ ವಿವಿಧ ವಿಭಾಗದವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಸಮಾವೇಶದ ಯಶಸ್ಸಿಗೆ ಶ್ರಮಿಸಿದ್ದು ಅವರಿಗೆಲ್ಲ ಕೃತಜ್ಞತೆ ಹೇಳಿದರು. ಈ ಸಮಾವೇಶದ ಮೂಲಕ ರಾಜ್ಯದಲ್ಲಿ ಚುನಾವಣೆ ಕಾವು ಆರಂಭವಾದಂತಾಗಿದೆ ಎಂದು ಹೇಳಿದ ಅವರು, ಈ ಸಮಾವೇಶದ ಧ್ವನಿಯಲ್ಲಿ ಜನರ ಅಸಮಾಧಾನ ಎದ್ದು ಕಾಣುತ್ತಿದೆ. ಇದೇ ಹುಮ್ಮಸ್ಸು ಚುನಾವಣೆಯ ತನಕವೂ ಇರಲಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಅಮೃತ ಮಹೋತ್ಸವ ಸಂಘಟನೆಯಲ್ಲಿ ನಿರ್ಣಾಯಾಕ ಪಾತ್ರ ವಹಿಸಿದ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪದಾಕಾರಿಗಳು ಸನ್ಮಾನಿಸಿದರು.
ಆರ್‌ಎಸ್‌ಎಸ್ ಕಚೇರಿ ಮೇಲೆ ಮೊದಲು ತಿರಂಗ ಹಾರಿಸಲಿ
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಮನೆ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಹೇಳುತ್ತಿದೆ. ಮೊದಲು ಆರ್ ಎಸ್‌ಎಸ್ ಕಚೇರಿಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಿ ಎಂದು ಎಸ್ಎಸ್ ಮಲ್ಲಿಕಾರ್ಜುನ್ ಹೇಳಿದರು. ಕಾಂಗ್ರೆಸ್ ಪಕ್ಷವು ಯಾವತ್ತೂ ತ್ರಿವರ್ಣ ಧ್ವಜವನ್ನು ಅತ್ಯಂತ ಗೌರವದಿಂದ ಕಂಡಿದೆ. ಇದೀಗ ದೇಶದ 75ನೇ ಸ್ವಾತಂತ್ರ ನಿಮಿತ್ತ ಅಲ್ಲಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದೆ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಾಗಾನಹಳ್ಳಿ ಪರಶುರಾಮ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯರುಗಳಾದ ಬೇತೂರು ಕರಿಬಸಪ್ಪ, ಕೆ.ಎಸ್. ಬಸವಂತಪ್ಪ, ನಗರ ಸಭೆ ಮಾಜಿ ಸದಸ್ಯ ಆರ್.ಹೆಚ್. ನಾಗಭೂಷಣ್, ಕಾಡಜ್ಜಿ ಚಂದ್ರಣ್ಣ, ಜಯಕುಮಾರ್, ಪಾಲಿಕೆಯ ಸದಸ್ಯ ಕಲ್ಲಳ್ಳಿ ನಾಗರಾಜ್, ಮಾರುತಿ ಶಾಮನೂರು ಮತ್ತಿತರರು ಉಪಸ್ಥಿತರಿದ್ದರು.