ದುಷ್ಚಟದ ಸ್ನೇಹಿತರೆಡೆ ಅಸಡ್ಡೆ ತೋರದೆ ಸನ್ನಡತೆಯತ್ತ ಕರೆತನ್ನಿ: ಸಿ.ಬಿ. ರಿಷ್ಯಂತ್

ಸುದ್ದಿ360 ದಾವಣಗೆರೆ, ಜು.23: ಸ್ನೇಹಿತರು ತಪ್ಪುದಾರಿ ತುಳಿದಾಗ ಅವರನ್ನು ಎಚ್ಚರಿಸುವುದು ಮತ್ತು ಅದನ್ನು ತಡೆಯುವುದು ನಿಜವಾದ ಸ್ನೇಹಿತನ ಕರ್ತವ್ಯ. ಬದಲಿಗೆ ಸ್ನೇಹಿತ ಏನಾದರೂ ಮಾಡಿಕೊಳ್ಳಲಿ ಎಂದು ಅಸಡ್ಡೆ ತೋರುವವರು ಸ್ನೇಹಿತನಾಗದೆ ಶತೃವಾಗುತ್ತಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.

ನಗರದ ಶಾಮನೂರು ರಸ್ತೆಯ ಚಾಣುಕ್ಯ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಾಣುಕ್ಯ ಸಂಸ್ಕೃತಿ ಸೌರಭ-22 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಯೊಬ್ಬ ಸಿಗರೇಟು ಸೇದುತ್ತಿದ್ದರೆ ಅದನ್ನು ಈಗಿನ ಪೀಳಿಗೆ ‘ಕೂಲ್’ ಎಂದು ಭಾವಿಸುತ್ತದೆ. ಆದರೆ ಅದು ತಪ್ಪು ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸ್ನೇಹಿತರು ಧೂಮಪಾನ ಮತ್ತಿತರ ದುಶ್ಚಟ ಮಾಡುವಾಗ ಅದನ್ನು ತಡೆಯಬೇಕಾದ್ದು ಒಬ್ಬ ನಿಜವಾದ ಸ್ನೇಹಿತನ ಕರ್ತವ್ಯ. ಅಲ್ಲದೆ, ದುಷ್ಚಟಗಳನ್ನು ಧಿಕ್ಕರಿಸಿ ಗೆದ್ದರೆ ಮುಂದಿನ ಜೀವನದಲ್ಲಿ ಅಂತಹ ಚಟಗಳು ಎಂದೂ ನಿಮ್ಮ ಬಳಿ ಸುಳಿಯುವುದಿಲ್ಲ ಎಂದು ಹೇಳಿದರು.

ತಪ್ಪನ್ನು ಧೈರ್ಯವಾಗಿ ಖಂಡಿಸಿ, ಪ್ರಶ್ನಿಸಿ. . .

ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ನಾಗರಿಕರು ತಮ್ಮ ಸುತ್ತ ಯಾವುದೇ ರೀತಿಯ ತಪ್ಪು ನಡೆದಾಗ ಅದನ್ನು ತಪ್ಪು ಎಂದು ಧೈರ್ಯವಾಗಿ ಹೇಳುವ, ಖಂಡಿಸುವ ಮತ್ತು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಸಲಹೆ ನೀಡಿದರು.

ನಿಮ್ಮ ಸುತ್ತ ಯಾರೇ ತಪ್ಪು ಮಾಡುತ್ತಿದ್ದರೂ ಅದನ್ನು ತಡೆಯುವ, ಪ್ರಶ್ನಿಸುವವರ ಧೈರ್ಯವನ್ನು ಯುವ ಸಮೂಹ ತೋರುತ್ತಿಲ್ಲ. ಬದಲಿಗೆ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಅಂದುಕೊಳ್ಳುವ ಮನೋಭಾವ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಮಕ್ಕಳಿಗೆ ಸೌಲಭ್ಯ ಮಾತ್ರವಲ್ಲ ಪೋಷಕರ ಗಮನ ಮುಖ್ಯ

ಮಕ್ಕಳಿಗೆ ಅಗತ್ಯವಿದೆಯೋ ಇಲ್ಲವೋ ಎಂದು ಅರಿತು ಅವರಿಗೆ ಸೌಲತ್ತುಗಳನ್ನು ನೀಡಬೇಕು. ಮಕ್ಕಳ ಬಳಿ ಮೊಬೈಲ್ ಇದ್ದರೆ ಅದರಲ್ಲಿ ಅವರು ಏನು ನೋಡುತ್ತಾರೆ, ಅವರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ, ಅವರ ಸಂಪರ್ಕದಲ್ಲಿರುವ ಸ್ನೇಹಿತರು ಎಂತಹವರು, ಮನೆಗೆ ಏಕೆ ತಡವಾಗಿ ಬರುತ್ತಾರೆ, ಪಾಕೆಟ್ ಮನಿಯನ್ನು ಯಾವ ರೀತಿ ಬಳಸುತ್ತಾರೆ ಎಂಬೆಲ್ಲಾ ಅಂಶಗಳ ಬಗ್ಗೆ ಗಮನಹರಿಸಬೇಕು. ಸೌಲಭ್ಯಗಳನ್ನು ಕೊಟ್ಟು ತಮ್ಮ ಕರ್ತವ್ಯ ಮುಗಿಯಿತು ಅಂದುಕೊಂಡರೆ ಮುಂದೆ ಆಗುವ ಅನಾಹುತಗಳಿಗೆ ಹೆತ್ತವರೇ ಕಾರಣರಾಗುತ್ತಾರೆ. ಮತ್ತು ದುಷ್ಚಟ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಕ್ಷಮಿಸುವ ಬದಲು ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಬೇರೆಯವರು ಎಚ್ಚೆತ್ತುಕೊಂಡು ಚಟಗಳಿಂದ ದೂರ ಇರುತ್ತಾರೆ ಎಂದು ಸಲಹೆ ನೀಡಿದರು.

ಗುರಿ ನಿಗದಿಗೆ ಪಿಯು ಸರಿಯಾದ ವಯಸ್ಸು

ಪಿಯು ಹಂತದ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಸಾಮರ್ಥ್ಯ, ಮನೋಬಲವಿರುತ್ತದೆ. ಭವಿಷ್ಯದಲ್ಲಿ ತಾವು ಏನಾಗಬೇಕು ಎಂಬುದನ್ನು ನಿರ್ಧರಿಸುವಷ್ಟು ಬೌದ್ಧಿಕ ಪಕ್ವತೆ ಕೂಡ ಬಂದಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪಿಯು ಹಂತದಲ್ಲಿಯೇ ತಮ್ಮ ಗುರಿ ನಿಗದಿ ಮಾಡಿಕೊಳ್ಳಬೇಕು. ಯಾವುದೇ ಕ್ಷೇತ್ರವನ್ನು ಮೇಲು ಅಥವಾ ಕೀಳು ಎಂದು ಭಾವಿಸದೆ ಸಾಧನೆಗೆ ಮುಂದಾಗಿ, ಅಕ್ರಮ ಮಾರ್ಗ ಹೊರತುಪಡಿಸಿ ಬೇರಾವ ಕ್ಷೇತ್ರವೂ ಕೀಳಲ್ಲ. ಆಸಕ್ತಿ ಹಾಗೂ ಸಾಧಿಸುವ ಛಲ ಇರಬೇಕು ಎಂದು ಎಸ್‌ಪಿ ರಿಷ್ಯಂತ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ನಾಗರಾಜ್ ಶೆಟ್ಟಿ, ಟ್ರಸ್ಟಿ ರೂಪಾ ನಾಗರಾಜ್ ಶೆಟ್ಟಿ, ಡೀನ್ ಬಿ.ಆರ್.ಟಿ ಸ್ವಾಮಿ, ಪ್ರಿನ್ಸಿಪಾಲ್ ಕೆ. ರಾಜಶೇಖರ್, ವಿದ್ಯಾನಗರ ಪೊಲೀಸ್ ಠಾಣೆ ಪಿಎಸ್‌ಐ ರೇಣುಕಾ, ಜಯಶ್ರೀ ಇತರರಿದ್ದರು. ವೇದಿಕೆ ಸಮಾರಂಭದ ಬಳಿಕ ಕಾಲೇಜು ವಿದ್ಯಾರ್ಥಿಗಳು ಡೊಳ್ಳು ಕುಣಿತ, ಕಂಸಾಳೆ, ನಾಸಿಕ್ ಡೋಲು, ನಂದಿ ಕೋಲು ಕುಣಿತ, ಯಕ್ಷಗಾನ, ಭರತನಾಟ್ಯಘಿ ಮೊದಲಾದ ದೇಸಿ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಗಮನಸೆಳೆದರು.

admin

admin

Leave a Reply

Your email address will not be published. Required fields are marked *

error: Content is protected !!