ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲ – ಭಕ್ತಿ ಪ್ರತಿಷ್ಠಾಪನೆ: ತರಳಬಾಳು ಶ್ರೀ

ಕೊಂಡಜ್ಜಿಯಲ್ಲಿ ವಿದ್ಯುಕ್ತವಾಗಿ ನಡೆದ ಆಂಜನೇಯಸ್ವಾಮಿ‌ ಹಾಗೂ ಗಂಗಾಪರಮೇಶ್ವರಿ ದೇವಿ ದೇವಸ್ಥಾನ ಉದ್ಘಾಟನೆ – ಕಳಸಾರೋಹಣ

ಸುದ್ದಿ360 ದಾವಣಗೆರೆ ಮಾ.3: ಇಡೀ ಮಾನವ ಕುಲಕ್ಕೆ ಪ್ರಾಣ ಕೊಡುವವನು ದೇವರೇ ಆಗಿರುವಾಗ, ದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಎನ್ನುವುದು ಸರಿಯಲ್ಲ. ಬದಲಿಗೆ ಇದನ್ನು ಭಕ್ತಿ ಪ್ರತಿಷ್ಠಾಪನೆ ಎಂದು ಕರೆಯಬೇಕು ಎಂದು ಸಿರಿಗೆರೆಯ ತರಳಬಾಳು ಬೃಹ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ‌ ಗ್ರಾಮದದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ‌ ಹಾಗೂ ಗಂಗಾಪರಮೇಶ್ವರಿ ದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಧರ್ಮಗಳು ಜಾತಿಗಳಾಗಿ ಬದಲಾಗಿದ್ದು, ಜಾತಿ, ಜಾತಿಗಳ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಧರ್ಮವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದು ಮನಸ್ಸಿನ ಒಳ ಧ್ವನಿಯಾಗಿದೆ. ಮನುಷ್ಯನಲ್ಲಿ ಇರುವುದು ಎರಡೇ ಜಾತಿ. ಒಂದು ಗಂಡು ಮತ್ತೊಂದು ಹೆಣ್ಣು. ಈಗಿನ ಜಾತಿಗಳ ಸೃಷ್ಟಿಕರ್ತರು ನಾವೇ ಆಗಿದ್ದೇವೆ.‌ ಹೀಗಾಗಿ ಈ ಜಾತಿಗಳ ನಡುವಿನ ಸಂಘರ್ಷ‌ ಬಿಟ್ಟು ಎಲ್ಲರೂ ಪ್ರೀತಿ ವಿಶ್ವಾಸದಿಂದ ಸಹ ಬಾಳ್ವೆ ನಡೆಸಬೇಕು‌ ಎಂದು ಕರೆ ನೀಡಿದರು.

ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯ, ನನ್ನ ಕಾಲೇ ಕಂಬ, ದೇಹವೇ ದೇಗುಲ.‌ ಶಿರವೇ ಹೊನ್ನ ಕಳಸವಯ್ಯ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಶ್ರೀಗಳು, ದೇವಸ್ಥಾನ ಕಟ್ಟುವುದಕ್ಕಿಂತ ಮನಸ್ಸಿನಲ್ಲಿಯೇ ದೇವರ‌ಭಕ್ತಿ ಕಾಣಬೇಕು.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಕೊಂಡಜ್ಜಿ ಬಸಪ್ಪ ಮತ್ತು ಅವರ ಕುಟುಂಬಕ್ಕೆ ಕೊಂಡಜ್ಜಿ ಬಗ್ಗೆ ವಿಶೇಷ ಸೆಳೆತ ಇದೆ. ಇಂದಿನ ರಾಜಕೀಯದಲ್ಲಿ ಕೊಂಡಜ್ಜಿ ಬಸಪ್ಪ ಅವರಂತಹ ಪ್ರಾಮಾಣಿಕ ರಾಜಕಾರಣಿ ಸಿಗುವುದು ಅಪರೂಪ. ಇಂತಹ ಅಪರೂಪದ ರಾಜಕಾರಣಿ ಪಡೆದ ಕೊಂಡಜ್ಜಿ ಜನರೇ ಧನ್ಯರು ಎಂದರು.

ಕಾರ್ಯಕ್ರಮದಲ್ಲಿ ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಹಿರಿಯೂರಿನ ಷಡಾಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಎಚ್.ಎಸ್. ಶಿವಶಂಕರ್, ಮೋಹನ್ ಕೊಂಡಜ್ಜಿ, ನಿವೃತ್ತ ಐಪಿಎಸ್ ಅಧಿಕಾರಿ ಶಿವಕುಮಾರ್ ಕೊಂಡಜ್ಜಿ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಉಪಾಧ್ಯಕ್ಷ ಷಣ್ಮುಖಪ್ಪ‌ ಕೊಂಡಜ್ಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಕೊಂಡಜ್ಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಜಿ. ಹನುಮಂತಪ್ಪ, ಆಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗೌಡ್ರ ಸಂಗಪ್ಪ ಇದ್ದರು. ಶ್ರದ್ಧಾಭಕ್ತಿಯಿಂದ ನಡೆದ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಧನ್ಯತೆ ಮೆರೆದರು.

admin

admin

Leave a Reply

Your email address will not be published. Required fields are marked *

error: Content is protected !!