ಸುದ್ದಿ360, ದಾವಣಗೆರೆ, ಜೂ.25: ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ರಜತ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ದೈವಜ್ಞ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಜೂ.26ರಂದು ಹಮ್ಮಿಕೊಂಡಿರುವುದಾಗಿ ಸೊಸೈಟಿಯ ಅಧ್ಯಕ್ಷ ಪ್ರಶಾಂತ್ ವಿ ವರ್ಣೇಕರ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ9 ಗಂಟೆಗೆ ನಗರದ ರಿಂಗ್ ರಸ್ತೆಯಲ್ಲಿರುವ ಶಾರದಾಂಬಾ ದೇವಸ್ಥಾನಕ್ಕೆ ಶ‍್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ಆಗಮಿಸಲಿದ್ದು, 10.30ರ ಸಮಯಕ್ಕೆ ದೇವಸ್ಥಾನದಿಂದ ವಸಂತ ರಸ್ತೆಯ ಶಿವಾಜಿ ಸರ್ಕಲ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸಿಲ್ವರ್ ಜುಬಿಲಿ ಟವರ್ ವರೆಗೆ ಬೈಕ್ ರ್ಯಾಲಿ ಸಾಗಲಿದೆ. ನಂತರ 11.45ಕ್ಕೆ ಪೂಜ್ಯ ಶ್ರೀಗಳಿಂದ ಕಟ್ಟಡ ಉದ್ಘಾಟನೆ ನೆರವೇರಲಿದೆ. ನಂತರ ಬೆಳಿಗ್ಗೆ 12.15ರಿಂದ ಪಿ.ಬಿ. ರಸ್ತೆಯ ನರಹರಿಶೇಟ್ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಎನ್. ವಿಠ್ಠಲಕರ್, ಸತ್ಯನಾರಾಯಣ ಆರ್.ರಾಯ್ಕರ್, ಮಹಾನಗರ ಪಾಲಿಕೆ ಸದಸ್ಯರಾದ ಸೊಗೆ ಶಾಂತಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಂಜುಳ ಎಸ್, ಸಮಾಜದ ರಾಜ್ಯಾಧ್ಯಕ್ಷ ರಾಮುರಾಯ್ಕರ್, ಕಾರವಾರ ಮಾಜಿ ಶಾಸಕ ಗಂಗಾಧರ್ ಭಟ್, ಸಮಾಜದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಆರ್ ರಾಯ್ಕರ್, ಕಾರ್ಯದರ್ಶಿ ವಿಠ್ಠಲ್ ಭಟ್ ಅವಾಜಿ, ಕೋಆಪ್ ಸೊಸೈಟಿಯ ಉಪಾಧ್ಯಕ್ಷ ರಾಜೀವ ವಿ. ವರ್ಣೇಕರ ಭಾಗವಹಿಸಲಿರುವುದಾಗಿ ಹೇಳಿದರು.
ಸೊಸೈಟಿಯ ಅಧ್ಯಕ್ಷ ಪ್ರಶಾಂತ್ ವಿ ವರ್ಣೇಕರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನುಉ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ವಹಿಸಲಿದ್ದು, ಈ ಸಂದರ್ಭದಲ್ಲಿ ಶ್ರೀಗಳು ದೈವಜ್ಞ ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ ಎಂದರು.
ಪ್ರಸ್ತುತ 2400 ಷೇರುದಾರರನ್ನು ಹೊಂದಿರುವ ಸೊಸೈಟಿಯು 2020-21ನೇ ಸಾಲಿಗೆ ಒಂದು ಕೋಟಿ ಎಂಟು ಲಕ್ಷ ಲಾಭಗಳಿಸಿದ್ದು, ಉತ್ತಮ ಬೆಳವಣಿಗೆಯಲ್ಲಿದೆ. ಷೇರುದಾರರು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಿರಿಯರಿಗೆ ಸಂಧ್ಯಾವೇತನ, ಅಂಗವಿಕಲರಿಗೆ ಪ್ರತಿ ತಿಂಗಳಿಗೆ 500 ರೂ. ನೀಡುತ್ತಾ ಬಂದಿದ್ದು, ಕೊರೋನಾ ಸಮಯದಲ್ಲಿ ಜನಪರ ಕಾರ್ಯಗಳಿಗೆ ಏಳು ಲಕ್ಷ ರೂ. ವಿನಿಯೋಗಿಸಲಾಗಿದೆ. ಇದೆಲ್ಲಕ್ಕೂ ಸೊಸೈಟಿಯ ಷೇರುದಾರರ ಸಹಕಾರ ಅಗತ್ಯವಾಗಿ ಸಿಕ್ಕಿದೆ ಎಂದು ಸೊಸೈಟಿಯ ಅಧ್ಯಕ್ಷ ಪ್ರಶಾಂತ್ ವಿ. ವರ್ಣೇಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ವಿ ಕುಡತರ್‍ಕರ್, ರಾಘವೇಂದ್ರ ಎನ್. ದಿವಾಕರ್, ರಾಘವೇಂದ್ರ ೆಸ್. ಕರ್ಡೇಕರ್, ಗಣೇಶ್ ಆರ್.ಶೇಟ್ ಇದ್ದರು.