ಸುದ್ದಿ360 ಬೆಂಗಳೂರು, ಜೂನ್ 18: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.61.88ರಷ್ಟು ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸುದ್ದೀಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಒಟ್ಟು 5,99,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮಾಂತರ ಪ್ರದೇಶದ ಫಲಿತಾಂಶ ಶೇ.62.18ರಷ್ಟಿದ್ದು ಉತ್ತಮವಾಗಿದೆ. ನಗರ ಪ್ರದೇಶದಲ್ಲಿ 61.78ರಷ್ಟಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (88.2), ಉಡುಪಿ ದ್ವಿತೀಯ (86.38), ವಿಜಾಪುರ ತೃತೀಯ (77.14) ಸ್ಥಾನದಲ್ಲಿವೆ. ಚಿತ್ರದುರ್ಗ (49.31) ಕೊನೆಯ ಸ್ಥಾನದಲ್ಲಿದೆ.
ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ಶೇ. 72.53, ವಾಣಿಜ್ಯ ಶೇ.64.97, ಕಲಾ ವಿಭಾಗ ಶೇ.58.71 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮರುಪರೀಕ್ಷೆ ತೆಗೆದುಕೊಂಡಿದ್ದ 14,403 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ ಎಂದು ತಿಳಿಸಿದರು.
ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresult.nic.in ನಲ್ಲಿ ಪಡೆಯಬಹುದಾಗಿದೆ.