ದಾವಣಗೆರಯಲ್ಲಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಸಿದ್ಧರಾಮಯ್ಯ
ಸುದ್ದಿ360 ದಾವಣಗೆರೆ, ಡಿ.30: ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸೇರಿದಂತೆ ನಮ್ಮ ರಾಷ್ಟ್ರಕವಿ ಕುವೆಂಪುರವರು ಈ ನೆಲವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. ಇಂತಹ ಮಹಾನುಭಾವರ ಪುತ್ಥಳಿಗಳನ್ನು ನಿರ್ಮಿಸಿ ಪೂಜೆ ಮಾಡಿದರೆ ಸಾಲದು, ಅವರ ತತ್ವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಎಲ್ಲರೂ ಮನುಷ್ಯರಂತೆ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ಅವರು ಇಂದು ನಗರದ ವೀರಮದಕರಿ ನಾಯಕ ವೃತ್ತದಲ್ಲಿ ಶ್ರೀ ಎಲ್.ಬಿ.ಕೆ. ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 7ನೇ ಬಾರಿಯ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾವು ಕಾಯಿಲೆಯೋ ಅಪಘಾತವೋ ಆಗಿ ರಕ್ತದ ತುರ್ತು ಇದ್ದಾಗ ಡಾಕ್ಟರ್ರೇ ನನ್ನನ್ನು ಬೇಗ ಗುಣಮುಖರನ್ನಾಗಿ ಮಾಡಿ ಅಂತೀವಿ, ಆಗ ಜಾತಿಯ ಧರ್ಮದ ಹೆಸರು ಹೇಳಿ ರಕ್ತ ಕೇಳದ ನಾವು. ಕಾಯಿಲೆಯಿಂದ ಗುಣಮುಖರಾದ ಮೇಲೆ ನನ್ನ ಜಾತಿ ಅದು ಧರ್ಮ ಇದು ಅಂತೆಲ್ಲಾ ಧರ್ಮದ ನಡುವೆ ಗೋಡೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಇಂತಹ ಗೋಡೆಗಳನ್ನು ಕೆಡುವುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
ಧರ್ಮಕ್ಕಾಗಿ ನಾವಿರದೆ ನಮಗಾಗಿ ಧರ್ಮವಿರಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಮೂಲತಃ ನಾವು ಮನುಷ್ಯರು ಎಂಬುದನ್ನು ಮರೆಯಬಾರದು. ಬಿ. ವೀರಣ್ಣನವರು ಶ್ರಮಜೀವಿ ಹಮಾಲಿಯಾಗಿ ದುಡಿದಿದ್ದಾರೆ. ಇಂದು ಸ್ಥಿತವಂತರಾಗಿರುವ ಅವರು ತಾವು ಗಳಿಸಿದ್ದರಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಮನೋಭಾವನೆ ಉಳ್ಳವರು. ಉಚಿತ ಸರ್ವಧರ್ಮ ವಿವಾವ ಮಾಡುತ್ತಿರುವ ವೀರಣ್ಣನವರ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಪಕ್ಕದ ಮನೆಯವರು ಅದ್ದೂರಿಯಾಗಿ ಮದುವೆಯಾದರು ಅಂತ ಹೆಚ್ಚು ಹಣ ಖರ್ಚು ಮಾಡಿ, ಮದುವೆಯಾಗಲು ಹೋಗಬೇಡಿ, ಸರಳವಾಗಿ ಇಲ್ಲವೇ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದು ಒಳ್ಳೆಯದು. ಲಕ್ಷಾಂತರ ಜನ ಸಾಲ ಮಾಡಿ, ಮದುವೆಯಾಗಿ ಬಡ್ಡಿ ಕಟ್ಟುವುದರಲ್ಲೇ ಜೀವನ ಕಳೆದುಬಿಡುತ್ತಾರೆ. ವೀರಣ್ಣನವರಂತಹ ಸತ್ಕಾರ್ಯಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಿ.
-ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಾಮೂಹಿಕ ವಿವಾಹ ಮಾಡಿರು ವೀರಣ್ಣನವರಿಗೆ ದೇವರು ಇನ್ನಷ್ಟು ಶ್ರೇಯಸ್ಸು ನೀಡಲಿ. ಸತಿ-ಪತಿಗಳು ಬಂಡಿಯ ಎರಡು ಗಾಲಿಯಂತೆ ಸರಿದಾರಿಯಲ್ಲಿ ನಡೆದು ಸಂತೋಷದಿಂದ ಜೀವನ ನಡೆಸಿ ಎಂದು ಹರಸಿದರು.
ಮನುಷ್ಯನಿಗೆ ಎರಡು ಕಣ್ಣುಗಳಿದ್ದರೂ ಒಂದೇ ದೃಷ್ಟಿ ಇರುವಂತೆ, ಎರಡೂ ಕಿವಿಗಳಿದ್ದರೂ ಒಂದೇ ಶಬ್ಧ ಕೇಳುವಂತೆ, ಸಂಸಾರದಲ್ಲಿ ಎರಡು ದೇಹಗಳಿದ್ದರೂ ಮನಸ್ಸು ಒಂದಾಗಿದ್ದರೆ, ಸುಖಿ ಜೀವನ ನಡೆಸಲು ಸಾಧ್ಯ.
-ಶ್ರೀ ಬಸವಪ್ರಭು ಸ್ವಾಮೀಜಿ, ವಿರಕ್ತಮಠ
ಕಾರ್ಯಕ್ರಮದಲ್ಲಿ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕರಾದ ಎಸ್.ರಾಮಪ್ಪ, ಅಬ್ದುಲ್ ಜಬ್ಬಾರ್, ಶ್ರೀಎಲ್‌ಬಿಕೆ ಕಲ್ಯಾಣ ಟ್ರಸ್ಟ್ ನ ಬಿ.ವೀರಣ್ಣ, ಲಕ್ಷ್ಮೀದೇವಿ ವೀರಣ್ಣ, ವಿನಾಯಕ ಪೈಲ್ವಾನ್, ಎನ್.ಎಂ. ಆಂಜನೇಯ ಗರೂಜಿ, ಎಂ.ಟಿ. ಸುಭಾಷ್, ಜಿಪಂ ಮಾಜಿ ಅಧ್ಯಕ್ಷ ವೈ.ರಾಮಪ್ಪ, ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ, ಸೈಯದ್ ಸೈಫುಲ್ಲಾ, ಹೊದಿಗೆರೆ ರಮೇಶ್, ಸವಿತಾ ಮಲ್ಲೇಶ ನಾಯ್ಕ, ಸಾದಿಕ್ ಪೈಲ್ವಾನ್, ಕೆ.ಪಿ. ಪಾಲಯ್ಯ ಇತರರು ಇದ್ದರು.