ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ಶ್ರೀಗಳು
ಸುದ್ದಿ360, ದಾವಣಗೆರೆ ಜು.11: ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್ ಎಂಬ ಸಂವಿಧಾನವಿದ್ದು, ಅದರ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ ಎಂದು ಕೇದಾರ ಪೀಠದ ಶ್ರೀಭೀಮಾಶಂಕರಲಿಂಗ ಜಗದ್ಗುರು ತಿಳಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಸೋಮವಾರ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕುಟುಂಬದ ಕೋರಿಕೆ ಮೇರೆಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.
ಪಂಚ ಪೀಠಗಳು ಒಂದಾಗಬೇಕೆಂಬುದು ಭಕ್ತರ ಬಹುದಿನಗಳ ಆಶಯ. ಇಂದು ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೂಡ ಅದೇ ಆಶಯ ವ್ಯಕ್ತಪಡಿಸಿದ್ದಾರೆ. ಪಂಚ ಪೀಠಗಳು ಒಂದಾಗಲು ನಮ್ಮ ಅಭ್ಯಂತರವೇನೂ ಇಲ್ಲ. ಶಾಮನೂರು ಶಿವಶಂಕರಪ್ಪನವರೇ ಮುಂದಾಗಿ ಧರ್ಮಸಂಸತ್‌ನಂತೆ ಕಾರ್ಯಕ್ರಮ ನಡೆಸುವುದಾದರೆ ನಾವು ಈಗಲೇ ಸಿದ್ಧ ಎಂದು ನುಡಿದರು.
ಮುಂದಿನ ಆಷಾಢ ಮಾಸದಲ್ಲಿ ಎಸ್.ಎಸ್. ಮಲ್ಲಿಕಾರ್ಜುನರ ನಿವಾಸದಲ್ಲೇ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಮ್ಮಿಕೊಳ್ಳುವ ಸಂಕಲ್ಪ ನಮ್ಮದಾಗಿದೆ. ಅದಕ್ಕೂ ಮುನ್ನ ಮಲ್ಲಿಕಾರ್ಜುನ ಅವರ ವಿಜಯೋತ್ಸವ ನಡೆಯಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಭಕ್ತರ ಆಶಯದಂತೆ ಪಂಚಪೀಠಗಳು ಒಂದಾಗಿ ದಾವಣಗೆರೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಭಕ್ತಗಣಕ್ಕೆ ಸಂದೇಶ ರವಾನಿಸುವಂತೆ ಶ್ರೀಗಳಲ್ಲಿ ಮನವಿ ಮಾಡಿದರು.
ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್, ಪ್ರೀತಿ ಬಕ್ಕೇಶ್ ಮತ್ತು ಮಕ್ಕಳು, ರೇಖಾ ಗಣೇಶ್, ಜ್ಯೋತಿ ಮುರುಗೇಶ್, ಸಂಬಂಧಿಕರು, ಸ್ನೇಹಿತರು ಇದ್ದರು.