ಸುದ್ದಿ360 ದಾವಣಗೆರೆ ಜೂ.21: ಯೋಗವು ಕೇವಲ ಯೋಗ ದಿನಾಚರಣೆಗೆ ಸೀಮಿತವಾಗದೇ ದಿನವೂ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ‘ನಿತ್ಯ ಮಾಡಿದರೆ ಯೋಗ ಲಭಿಸುವುದು ಆರೋಗ್ಯ ಭಾಗ್ಯ ‘ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಂತಾರಾಷ್ಟ್ರೀಯ ಯೋಗ ಪಟು, ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳ ಪೊಲೀಸ್ ಪದಕ ವಿಜೇತರಾದ ರಾಮಚಂದ್ರ ಬಿ ಜಾದವ್ ರವರು ತಿಳಿಸಿದರು.
ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ವಸತಿ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯೋಗಾಸನಗಳು, ಪ್ರಾಣಾಯಾಮ ಮತ್ತು ಷಟ್ ಕ್ರಿಯೆಗಳ ಮಹತ್ವವನ್ನು ಸಾರಿದರು.
ಯೋಗವು ಮನುಷ್ಯನ ಆರೋಗ್ಯಕರ ಜೀವನಕ್ಕೆ ಪೂರಕ. ಯೋಗವನ್ನು ನಿಯಮಿತವಾಗಿ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಹಲವು ಆಸನಗಳ ಪ್ರದರ್ಶನ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಯತೀಶ್ ಆಚಾರ್ ವಹಿಸಿದ್ದರು, ಪೊಲೀಸ್ ಇಲಾಖೆಯ ಎಎಸ್ಐ ವೀರನಗೌಡರು ಉಪಸ್ಥಿತರಿದ್ದರು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.