ಸುದ್ದಿ360 ದಾವಣಗೆರೆ, ಜು.13:ಮುಂಬರುವ ದಿನಗಳಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ಎಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎ ಬಸವರಾಜ್ ಹೇಳಿದರು.
ಬುಧವಾರ ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ವರದಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವ್ಯಾವ ಭಾಗದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದೆಯೋ ಆ ಪ್ರದೇಶಗಳ ನದಿ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ಸೂಚನೆಯಾಗಿ ಮಾಹಿತಿ ನೀಡಿ, ಬೇರೆಡೆಗೆ ಸ್ಥಳಾಂತರ ವಾಗುವಂತೆ ಜಾಗೃತಿ ಮೂಡಿಸಬೇಕು. ನದಿ ನೀರು ಹೆಚ್ಚಾಗಿ ಹರಿದುಬರುವುದರಿಂದ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದ್ದರೆ ಮುಂಚಿತವಾಗಿ ಅಂತಹ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆದು ಊಟ, ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅವರಿಗೆ ನೀಡುವ ಊಟ ಗುಣಮಟ್ಟದ್ದಾಗಿರಬೇಕು, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಗುರುತಿಸಿ ಎ.ಬಿ.ಸಿ ಗುಂಪುಗಳಾಗಿ ವಿಂಗಡಿಸಿ ತುರ್ತಾಗಿ ಸೂಕ್ತ ಪರಿಹಾರ ಒದಗಿಸಬೇಕು ಎಂದರು.
ಸರ್ಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ. ಹೊನ್ನಾಳಿ-ನ್ಯಾಮತಿ ತಾಲ್ಲೂಕು ಒಳಗೊಂಡಂತೆ ಜಿಲ್ಲೆಯಲ್ಲಿ ರೈತರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಸ್ಪಂದಿಸಬೇಕು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬಿತ್ತನೆ ಸಾಧ್ಯ ಇರುವ ಕಡೆ ಬಿತ್ತನೆ ಮಾಡುವ ಮೂಲಕ ನಿಗದಿಪಡಿಸಿಕೊಂಡಿರುವ ಬಿತ್ತನೆ ಗುರಿ ತಲುಪಲು ಪ್ರಯತ್ನಿಸಿ, ರಸಗೊಬ್ಬರದ ಕೊರತೆ ಮತ್ತು ಕಳಪೆ ಬಿತ್ತನೆ ಬೀಜ ವಿತರಿಸಿರುವ ಪ್ರಕರಣಗಳು ಕಂಡುಬಂದಲ್ಲಿ ದಾಸ್ತಾನುದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ, ರೈತರ ವಿಷಯದಲ್ಲಿ ಯಾವುದೇ ಲೋಪವಾದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದರು.
ಮಳೆಗಾಲ ಮುಗಿಯುವವರೆಗೂ ಹಾಳಾದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ಥಿ ಮಾಡಿ, ಮಳೆಗಾಲ ಮುಗಿದ ನಂತರ ಕಾಮಗಾರಿ ಕೈಗೊಳ್ಳಿ. ಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಮಿಕ ರೋಗಗಳು ಬರುವ ಸಾಧ್ಯತೆ ಇದೆ, ಹಾಗಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಡ್ರೈನೇಜ್, ಚರಂಡಿ, ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಸಾರ್ವಜನಿಕರು ದೂರು ಹೇಳದಂತೆ ಕಾರ್ಯ ನಿರ್ವಹಿಸಿ. ಒಂದು ವೇಳೆ ಲೋಪದೋಷಗಳು ಕಂಡು ಬಂದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಅಧಿಕಾರಿಗಳು ಮೈಗಳತನ ಬಿಟ್ಟು ಪ್ರಾಮಾಣಿಕವಾಗಿ ಶ್ರಮವಹಿಸಿ ಕೆಲಸ ಮಾಡಬೇಕು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಗುರುತಿಸಿ ಎನ್.ಡಿ.ಆರ್.ಎಫ್ ಅನ್ವಯ ಪರಿಹಾರ ಒದಗಿಸಬೇಕು. ಕ್ಷೇತ್ರದಲ್ಲಿ ಕೆಲವೆಡೆ ಅಡಿಕೆ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಹಾನಿಗೊಳಗಾದ ಅರ್ಹ ರೈತರಿಗೆ ಪರಿಹಾರ ದೊರಕಿಸುವ ಕೆಲಸವಾಗಬೇಕು. ಅನೇಕ ಕಡೆಗಳಲ್ಲಿ ರೈತರು ಮೂರು ಬಾರಿ ಬಿತ್ತನೆ ಮಾಡಿದ್ದಾರೆ, ಇದಕ್ಕೆ ಕಾರಣ ಕಳಪೆ ಬಿತ್ತನೆ ಬೀಜ ವಿತರಣೆ ಹೌದೋ ಅಲ್ಲವೋ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಮಹಾಂತೇಶ ಬೀಳಗಿ ಅವರನ್ನ ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ತಹಶೀಲ್ದಾರ್ ರಶ್ಮಿ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.