ಸುದ್ದಿ360 ದಾವಣಗೆರೆ, ಆ.07: ನೈಜ ಘಟನೆ ಆಧಾರಿತ ತಾಜ್ ಮಹಲ್-2 ಕನ್ನಡ ಚಲನಚಿತ್ರ ಸೆ.2ರಂದು ರಾಜ್ಯದ ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಟ, ನಿರ್ದೇಶಕ ದೇವರಾಜ್ ಕುಮಾರ್ ತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಾಜ್ ಮಹಲ್ 2 ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ಕಥೆ ಹೊಂದಿರುವ ಚಿತ್ರವಾಗಿದೆ. ಚಿತ್ರದಲ್ಲಿ ನಾನೇ ನಾಯಕ ನಾಗಿ ಅಭಿನಯಿಸಬೇಕು ಎಂದು ನಿರ್ಧರಿಸಿ ಪ್ರಥಮ ಬಾರಿ ನಾಯಕನಾಗಿ ಅಭಿನಯ ಮಾಡಿರುವೆ. ಟ್ರೈಲರ್ ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ತಾಜ್ ಮಹಲ್ 2 ಚಿತ್ರ ಸದಭಿರುಚಿ, ಅತ್ಯುತ್ತಮ ಪ್ರೇಮಕಥೆಯ ಚಿತ್ರವಾಗಿದ್ದು, ಕುಟುಂಬದ ಎಲ್ಲರೂ ಕುಳಿತು ನೋಡಬಹುದಾದ ಚಿತ್ರವಾಗಿದೆ ಎಂದು ತಿಳಿಸಿದರು.
ಕನ್ನಡ ಚಿತ್ರರಂಗಕ್ಕೆ ಮೇಕಪ್ ಮ್ಯಾನ್ ಆಗಿ ಪ್ರವೇಶಿಸಿ ರವಿಚಂದ್ರನ್, ಪುನೀತ್ ರಾಜ್ಕುಮಾರ್ ಹಾಗೂ ರಾಧಿಕಾ ಪಂಡಿತ್, ನಿಧಿ ಸುಬ್ಬಯ್ಯ ಇತರರಿಗೆ ಮೇಕಪ್ ಮಾಡಿರುವ ಅನುಭವದ ಆಧಾರದಲ್ಲಿ ನಿರ್ದೇಶಕನಾಗಿ ಡೇಂಜರ್ ಝೋನ್, ನಿಶಬ್ದ-2, ಅನುಷ್ಕ ಚಿತ್ರಗಳ ನಿರ್ದೇಶನ ಮಾಡಿದ್ದೇನೆ ಎಂದು ತಿಳಿಸಿದರು.
ಪದವೀಧರ ಯುವಕನೋರ್ಷ ಕಬ್ಬಿನ ಜ್ಯೂಸ್ ಮಾರಾಟ ಮಾಡಿಕೊಂಡಿರುತ್ತಾನೆ. ಇದರೊಂದಿಗೆ ಎಲ್ಲರಿಗೂ ಸಹಾಯ ಮಾಡುವ ಮನಸ್ಥಿತಿಯವನಾಗಿದ್ದು, ಅಂತಹವನ ಬಾಳಲ್ಲಿನ ಸಣ್ಣ ಘಟನೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದರ ಸುತ್ತ ಚಿತ್ರ ಸಾಗುತ್ತದೆ ಎಂದು ತಿಳಿಸಿದರು.
ಟ್ಯಾಬ್ಲೋ ಮೂಲಕ ರಾಜ್ಯದ ಎಲ್ಲ ಭಾಗದಲ್ಲಿ ಚಿತ್ರದ ಪ್ರಚಾರ ನಡೆಸಲಾಗುತ್ತಿದೆ. ತುಮಕೂರು, ಶಿರಾ, ಚಿತ್ರದುರ್ಗ ಇತರೆ ಭಾಗದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಟ ರಿತೇಶ್, ಗೀತ ರಚನಕಾರ ಮನ್ವರ್ಸಿ ನವಲಗುಂದ ಇದ್ದರು.