ಸುದ್ದಿ 360 ದಾವಣಗೆರೆ, ಜ.10: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ಬಳಿಕ ಜಯದೇವ ವೃತ್ತ, ಗಾಂಧಿ ವೃತ್ತ, ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ದಲಿತರ ಮೂಗಿಗೆ ತುಪ್ಪ ಹಚ್ಚುವ ಕೆಲಸ
ಈ ವೇಳೆ ಮಾತನಾಡಿದ ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ಪ್ರೊ.ಎ.ಬಿ. ರಾಮಚಂದ್ರಪ್ಪ, ಚುನಾವಣೆ ಸಮಯ ಸಮೀಪಿಸಿರುವ ಕಾರಣ ಮೀಸಲಾತಿ ನಾಟಕ ಆರಂಭಿಸಿರುವ ರಾಜ್ಯ ಸರಕಾರ, ದಲಿತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ಮೇಲ್ಜಾತಿಯವರಿಗೆ ಮೀಸಲಾತಿ ನೀಡಲು ಸರಕಾರ ಮುಂದಾಗಿದೆ ಎಂದರು.
ಕೇಂದ್ರ ಸರಕಾರ, ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿ ವ್ಯವಸ್ಥೆ ಒಡೆದು ಹಾಕುವ ದುರುದ್ದೇಶದಿಂದ ಆರ್ಥಿಕ ಸ್ಥಿತಿ ಆಧಾರದಲ್ಲಿ ಮೀಸಲಾತಿ ನೀಡಲು ಮುಂದಾಗಿದೆ. ಕರ್ನಾಟಕದಲ್ಲಿ ಕೇವಲ ಶೇ.4ರಷ್ಟಿರುವ ಒಂದು ಸಮುದಾಯದ ಜನರಿಗೆ ಶೇ.10 ಮೀಸಲಾತಿ ನೀಡಲಾಗುತ್ತಿದೆ. ಯಾವುದೇ ಆಯೋಗ ರಚಿಸದೆ, ವರದಿ ಪಡೆಯದೆ, ಮೀಸಲಾತಿ ಕೇಳದಿದ್ದರೂ ಕೆಲ ಸಮುದಾಯಗಳಿಗೆ ಸರಕಾರ ಮೀಸಲಾತಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಕೂಡಲೇ ಯಥಾವತ್ತಾಗಿ ಅಂಗೀಕರಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಿ.ಜೆ. ಮಹಾಂತೇಶ್, ಚಂದ್ರಪ್ಪ, ಎಂ. ಲಿಂಗರಾಜು, ಅಣಜಿ ಹನುಮಂತಪ್ಪ, ಪ್ರದೀಪ್, ಮಂಜುನಾಥ್, ವಿಜಯ ಲಕ್ಷ್ಮೀ, ಹಾಲುವರ್ತಿ ಮಹಾಂತೇಶ್, ಸಣ್ಣ ಅಜ್ಜಯ್ಯ, ಬನ್ನಿ ಹಟ್ಟಿ ನಿಂಗಪ್ಪ, ಜಿ.ಎಸ್. ಶಂಭುಲಿಂಗಪ್ಪ, ಗುಮ್ಮನೂರು ಹನುಮಂತ, ಮಂಜುನಾಥ್ ಲೋಕಿಕೆರೆ, ಮಂಜುನಾಥ್, ತಿಪ್ಪೇಶ್, ಚಿತ್ರಲಿಂಗಪ್ಪ ಬಸವರಾಜ್, ರಾಜಪ್ಪ, ಇದ್ದರು.