ಸುದ್ದಿ360 ದಾವಣಗೆರೆ ಜೂ.16: ಈ ಹಿಂದಿನ ಪಠ್ಯಪುಸ್ತಕದ ಬಗ್ಗೆಯೂ ಆಕ್ಷೇಪಣೆಗಳಿವೆ. ಯಾವುದನ್ನು ಸರಿಪಡಿಸಬೇಕು ಎಂಬುದರ ಬಗ್ಗೆ ಸಲಹೆಗೆ ಮುಕ್ತ ಅವಕಾಶವಿದೆ. ರಾಜ್ಯದ ಜನರ ಸಲಹೆ ಸೂಚನೆ ಪಡೆದು ವೆಬ್ ಸೈಟ್ ನಲ್ಲಿ ಹಾಕಲಾಗುವುದು. ಒಟ್ಟಾರೆ ಎಲ್ಲಾ ಆಕ್ಷೇಪಣೆಗಳಿಗೆ ಸಲಹೆ ಪಡೆದ ನಂತರ ಪಠ್ಯ ಪರಿಷ್ಕರಣೆ ಅಂತಿಮ ರೂಪ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಪ್ಪಳ್ಳಿಯಿಂದ ಬೆಂಗಳೂರಿಗೆ ಪ್ರಗತಿಪರರು ಪಾದಯಾತ್ರೆ ಮಾಡುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಪಠ್ಯಕ್ರಮ ಪರಿಷ್ಕರಣೆ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಲಾಗಿದೆ. ಪಠ್ಯಕ್ರಮದಲ್ಲಿ ಯಾವ ವಿಷಯ ಇರಬೇಕು ಎಂಬ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಜನತೆ ನೀಡಿದ ಸಲಹೆಯಂತೆ ಪಠ್ಯಪರಿಷ್ಕರಣೆ ಮಾಡಲಾಗುವುದು ಎಂದರು.
ದಾವಣಗೆರೆಗೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಎಸ್.ಎ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಮೇಯರ್ ಜಯಮ್ಮ ಗೋಪಿನಾಯ್ಕ್, ಎಸ್.ವಿ ರಾಮಚಂದ್ರ, ಪೂರ್ವವಲಯ ಐಜಿಪಿ ಕೆ.ತ್ಯಾಗರಾಜನ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಒ ಡಾ.ಎ ಚನ್ನಪ್ಪ, ಎಸ್ಪಿ ಸಿ.ಬಿ. ರಿಷ್ಯಂತ್, ಎಎಸ್ ಪಿ ರಾಮಗೊಂಡ ಬಸರಗಿ, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ, ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್ ಶಿವಯೋಗಿ ಸ್ವಾಮಿ ಹಾಗೂ ಇತರರು ಹಾಜರಿದ್ದರು.