ಸುದ್ದಿ360, ದಾವಣಗೆರೆ ಜು.11: ಇದೇನು ನಮ್ಮ ಹಿರಿಯ ನಾಗರೀಕರು ಹೀಗೆ ತಮ್ಮ ಜೋಡು ಬಿಟ್ಟು ಸರತಿ ಸಾಲಿನಲ್ಲಿ ಕೂತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದೀರಾ…
ಇದು ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಇರುವ ಮುಖ್ಯ ಅಂಚೆ ಕಚೇರಿಯ ಮುಂಭಾಗ ಸೋಮವಾರ ಕಂಡು ಬಂದ ದೃಶ್ಯ. ಹೌದು ಸ್ವಾಮಿ ಇವರೆಲ್ಲಾ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರತಿ ತಿಂಗಳು ನೀಡುವ ಪಿಂಚಣಿ ಪಡೆಯಲು ಹೀಗೆ ಬೆಳಗ್ಗೆ 5 ಗಂಟೆಯಿಂದಲೇ ಕಚೇರಿ ಬಳಿ ಸಾಲು ಸಾಲಾಗಿ ನಿಂತು ಕೊನೆಗೆ ನಿಲಲು ಆಗದೆ ತಮ್ಮ ಪಾದರಕ್ಷೆಗಳನ್ನು ಸಾಲಾಗಿ ಬಿಟ್ಟು ಪಕ್ಕದಲ್ಲಿ ಕುಳಿತಿದ್ದಾರೆ.
ಹಿರಿಯ ನಾಗರಿಕರ ಬ್ಯಾಂಕ್ ಖಾತೆ ವಿವರ ಸಂಗ್ರಹಿಸಿ ಅವರ ಖಾತೆಗೆ ನೇರವಾಗಿ ಜಮೆ ಮಾಡುವ ಕೆಲಸ ಪಿಂಚಣಿ ಇಲಾಖೆಯಿಂದ ಆಗಬೇಕಿದೆ. ಅಂಚೆ ಕಚೇರಿ ಬಳಿ ಬಂದು ಹಣ ಪಡೆದುಕೊಳ್ಳುವುದು ಹಿರಿಯ ನಾಗರಿಕರಿಗೆ ತ್ರಾಸದಾಯಕ. ಕಚೇರಿಗೆ ಬಂದರೆ ಎಷ್ಟೋ ಬಾರಿ ಸಿಬ್ಬಂದಿ ಇಲ್ಲ ಎನ್ನುವ ಕಾರಣಕ್ಕೆ ಬರಿಗೈಯಲ್ಲಿ ಹಿಂದಿರುಗಬೇಕಾಗುತ್ತದೆ. ಸಹಾಯಕ ಅಂಚೆ ಅಧೀಕ್ಷಕರು ಈ ಬಗ್ಗೆ ಗಮನಹರಿಸಬೇಕು ಎಂದು ಎಂದು ಹಿರಿಯ ನಾಗರಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಪ್ರತಿ ತಿಂಗಳು ಹಿರಿಯ ಜೀವಗಳು ಸರತಿ ಸಾಲಿನಲ್ಲಿ ನಿಲ್ಲಲು ತಮ್ಮ ದೇಹ ಸ್ಪಂದಿಸದೇ ಇದ್ದರೂ ಕಚೇರಿ ಮುಂದೆ ಸಾಲಿನಲ್ಲಿ ನಿಂತು ಕಷ್ಟ ಪಡುತ್ತಾರೆ. ಇದನ್ನು ಹಿರಿಯ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ತಮ್ಮ ಜೀವನಕ್ಕೆ ಪಿಂಚಣಿಯನ್ನೇ ನಂಬಿರುವ ಹಿರಿಯ ಜೀವಗಳಿಗೆ ಪಿಂಚಣಿಯನ್ನು ಸಕಾಲಕ್ಕೆ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಂಚೆ ಕಚೇರಿ ಸಿಬ್ಬಂದಿ ಕರ್ತವ್ಯ ನಿಷ್ಠೆ ಜೊತೆಗೆ ಮಾನವೀಯತೆ ಮೆರೆಯಬೇಕಿದೆ.
ಪಿಂಚಣಿದಾರರಿಗೆ ನೆರವಾಗಲು ಪಿಂಚಣಿ ಹಣ ವಿತರಣೆಗಾಗಿ ಎರಡು ಕೌಂಟರ್ ತೆರೆಯಲಾಗಿದೆ. ಆದರೂ ಇನ್ನು ಹೆಚ್ಚಿನ ಜಾಗೃತಿ ವಹಿಸಿ ಹಿರಿಯ ನಾಗರಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಂಚೆ ಅಧೀಕ್ಷ ವಿರೂಪಾಕ್ಷಪ್ಪ ಹೇಳಿದ್ದಾರೆ.
ಈ ಹಿರಿಯ ಜೀವಗಳು ತಮ್ಮ ಪಿಂಚಣಿ ಪಡೆಯಲು ಅಂಚೆ ಕಛೇರಿಗೆ ಬರಬೇಕಾದರೆ ಇನ್ನೊಬ್ಬರನ್ನು ಆಶ್ರಯಿಸಿಯೇ ಬರಬೇಕು. ಕೈ, ಕಾಲು ಊನಗೊಂಡವರು, ಅಶಕ್ತರು, ಊರುಗೋಲು ಇಲ್ಲದೇ ಒಂದು ಹೆಜ್ಜೆ ಇರಿಸಲು ಆಗದ ಅಸಹಾಯಕ ವೃದ್ಧರು ಕೂಡ ತಮಗೆ ಆಸರೆಯಾಗಿರುವ ಪಿಂಚಣಿ ಪಡೆಯಲು ಇಲ್ಲಿಗೆ ಬರಲೇಬೇಕಾದ ಸ್ಥಿತಿ ಇದೆ.
ಸರಕಾರದ ವಿವಿಧ ಇಲಾಖೆಗಳಡಿ ಮಂಜೂರಾಗುವ ಸಾಲ ಸೌಲಭ್ಯಗಳ ಹಣ ನೇರ ನಗದು ಯೋಜನೆಯಡಿ (ಡಿಬಿಟಿ) ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತದೆ. ಆದರೆ ಪ್ರತಿ ತಿಂಗಳು ಹಿರಿಯ ನಾಗರಿಕರು ಪಿಂಚಣಿಗಾಗಿ ಅಂಚೆ ಕಚೇರಿಗೆ ನಾಲ್ಕೈದು ಬಾರಿ ಸುತ್ತಾಡಬೇಕಿದೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಪಿಂಚಣಿ ನೀಡುವ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವ ಕಾರಣ ತ್ವರಿತ ವಿತರಣೆ ಸಾಧ್ಯವಾಗುತ್ತಿಲ್ಲ. ಪರಿಣಾಮ ತಮ್ಮ ಪರದಾಟ ತಪ್ಪಿಸಲು ಪಿಂಚಣಿ ವಿತರಣೆ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸುವಂತೆ ಪಿಂಚಣಿದಾರರು ಒತ್ತಾಯಿಸಿದ್ದಾರೆ.