ಪುಸ್ತಕ ಓದುವ ಸಂಸ್ಕೃತಿ ಕಣ್ಮರೆ – ಆತಂಕಕಾರಿ – ಡಾ.ಎಸ್.ಆರ್. ಅಂಜನಪ್ಪ ವಿಷಾದ

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಮೃತ ಪುಸ್ತಕ ಮಾರಾಟ ಅಭಿಯಾನ

ಸುದ್ದಿ360 ದಾವಣಗೆರೆ, ಆ.25: ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರು ಇತ್ತೀಚೆಗೆ ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ದಿನೇ ದಿನೇ ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸರಕಾರಿ ಪ್ರಥಮದರ್ಜೆ ಲೀಡ್ ಕಾಲೇಜು ಪ್ರಾಂಶುಪಾಲ ಡಾ.ಎಸ್.ಆರ್. ಅಂಜನಪ್ಪ ವಿಷಾದ ವ್ಯಕ್ತಪಡಿಸಿದರು.

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಅಂಗವಾಗಿ ನಗರದ ಡೆಂಟಲ್ ಕಾಲೇಜು ರಸ್ತೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂದು ಹಮ್ಮಿಕೊಂಡಿದ್ದ ಅಮೃತ ಪುಸ್ತಕ ಮಾರಾಟ ಅಭಿಯಾನ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಮುಖ್ಯವಾಗಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಮರೆಯಾಗಿರುವ ಓದುವ ಹವ್ಯಾಸವನ್ನು ಜಾಗೃತಗೊಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಅಮೃತ ಪುಸ್ತಕ ಮಾರಾಟ ಅಭಿಯಾನ ಆಯೋಜಿಸಲಾಗಿದೆ ಎಂದರು.

ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಸಿ.ಕೆ. ಕೊಟ್ರಪ್ಪ ಮಾತನಾಡಿ, ಎಲ್ಲರ ಕೈಗೂ ಮೊಬೈಲ್‌ಗಳು ಬಂದಾಗಿನಿಂದ ಪುಸ್ತಕಗಳು ಮೂಲೆ ಸೇರಿವೆ. ಮೊಬೈಲ್ ನೋಡುವುದರಲ್ಲೇ ಮುಳುಗುವ ವಿದ್ಯಾರ್ಥಿಗಳು ಪುಸ್ತಕಗಳನ್ನು ಮುಟ್ಟುತ್ತಿಲ್ಲ. ಈ ಹವ್ಯಾಸ ಬದಲಿಸಿ, ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರದರ್ಶನದಲ್ಲಿನ ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಸ್ವಾತಂತ್ರ‍್ಯ ಹೋರಾಟ ಮತ್ತು ಕರುನಾಡಿನ ಸ್ವಾತಂತ್ರ‍್ಯ ಹೋರಾಟಗಾರರ ಕುರಿತ ಮಾಹಿತಿ ಒಳಗೊಂಡ 24 ನಿಮಿಷಗಳ ಸಾಕ್ಷ್ಯಚಿತ್ರ  ಪ್ರದರ್ಶಿಸಲಾಯಿತು. ಸಮಾರಂಭದಲ್ಲಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ಟಿ. ಗೀತಾದೇವಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್. ಗಿರಿಸ್ವಾಮಿ, ಐಕ್ಯುಎಸಿ ಸಂಚಾಲಕ ಡಾ.ಕೆ. ನಾರಾಯಣಸ್ವಾಮಿ, ನೋಡಲ್ ಅಧಿಕಾರಿ ಡಾ.ಜಿ.ಎಂ. ಮನೋಹರ, ಡಾ.ಎಸ್.ಎಂ. ಲತಾ, ಅಬಿಯಾನದ ಸಂಚಲಕ ಡಾ.ಎಚ್. ಓಂಕಾರ ನಾಯ್ಕ್, ಪ್ರಾಧ್ಯಾಪಕರಾದ ಡಾ.ಟಿ. ಮಜಣ್ಣ, ಪ್ರೊ. ಭೀಮಣ್ಣ ಸುಣಗಾರ್ ಇತರರು ಇದ್ದರು.

ಆಗಸ್ಟ್ 2ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಭಿಯಾನ ಆರಂಭವಾಗಿದ್ದು, ನಂತರ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಗದಗ, ಬಳ್ಳಾರಿ, ವಿಜಯನಗರ, ಕೊಪ್ಪಳ, ತುಮಕೂರು, ರಾಯಚೂರು, ಚಿತ್ರದುರ್ಗ, ಯಾದಗಿರಿ ಬಳಿಕ ಗುರುವಾರ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯಿತು. ಅಂತಿಮವಾಗಿ ಆ.29ರಂದು ಬೀದರ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಭಿಯಾನ ಸಂಬಂಧ ಎರಡು ಟೆಂಪೋ ಟ್ರಾವೆಲರ್ ವಾಹನಗಳನ್ನು ಸಿದ್ಧಪಡಿಸಿದ್ದು, ಒಂದು ವಾಹನ ಉತ್ತರ ಕರ್ನಾಟಕ ಮತ್ತೊಂದು ವಾಹನ ದಕ್ಷಿಣ ಕರ್ನಾಟಕದಲ್ಲಿ ಸಂಚರಿಸಿ ಪುಸ್ತಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿವೆ.

ಅಭಿಯಾನದಲ್ಲಿ ಲಭ್ಯವಿದ್ದ ಪುಸ್ತಕ ಮಾಲೆ

ಪ್ರದರ್ಶನಲ್ಲಿ ಅಕಾಡೆಮಿಯ ಸಮಗ್ರ ಮಾಲಿಕೆಯ ಒಟ್ಟು 345 ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. ಈ ಪೈಕಿ ಏಳು ವಿಭಾಗಗಳನ್ನು ಮಾಡಿ ಒಂದೊಂದು ವಿಭಾಗದ ಒಂದೊಂದು ಸೆಟ್ ರೂಪಿಸಿ ಆ ಸೆಟ್‌ನಲ್ಲಿರುವ ಎಲ್ಲ ಪುಸ್ತಕಗಳ ಒಟ್ಟು ಬೆಲೆ ಮೇಲೆ ಶೇ.50 ರಿಯಾಯಿತಿ ನೀಡಲಾಯಿತು. ವಜ್ರದ ಬೇರುಗಳು ಮಾಲೆ, ದೇಸಿ ದರ್ಶನ ಮಾಲೆ, ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕ (75 ಪುಸ್ತಕಗಳು), ಪಾರಿಭಾಷಿಕ ಮಾಲೆ, ಸಬಾಲ್ಟ್ರನ್ ಓದು ಮಾಲಿಕೆ, ಉಪಸಂಸ್ಕೃತಿ ಮಾಲೆ, ಸಂಸ್ಕೃತಿ ಮಹಿಳಾ ಮಾಲಿಕೆಯ ಪುಸ್ತಕ ಗುಚ್ಚಗಳು ಪ್ರದರ್ಶನದಲ್ಲಿ ಮಾರಾಟಕ್ಕಿದ್ದವು.

admin

admin

Leave a Reply

Your email address will not be published. Required fields are marked *

error: Content is protected !!